ಬೆಂಗಳೂರು: ರಾಷ್ಟ್ರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸಣ್ಣತನದಿಂದ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬೇರೆ ಅನೇಕ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಿದೆ,ಹಾಗಂತ ನಾವು ಕೂಡ ನಮ್ಮ ಹಣಕಾಸು ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳಬಾರದಲ್ಲವೇ ಎಂದು ಪ್ರಶ್ನಿಸಿದರು.
ರಾಷ್ಟ್ರದ ಜನತೆಯ ಹಿತದೃಷ್ಟಿಯಿಂದ ಪ್ರಧಾನಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಹಣಕಾಸು ವ್ಯವಸ್ಥೆಗೆ ಹಿನ್ನಡೆ ಉಂಟಾಗಬಾರದು ಎಂದು ಅವರು ರಾಷ್ಟ್ರದ ಜನತೆಗೆ ಕೆಲವು ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಇದರಲ್ಲಿ ತಪ್ಪು ಹುಡುಕುವಂಥದ್ದು ಏನಿದೆ ಎಂದು ಪ್ರಶ್ನಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು ಒಂಬತ್ತು ವಿಷಯಗಳ ಬಗ್ಗೆ ಪ್ರಧಾನಿಗಳು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಅನಗತ್ಯವಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅವರೇ ಇವತ್ತು ಅಧಿಕಾರದಲ್ಲಿದಿದ್ದರೆ ಏನು ಮಾಡುತ್ತಿದ್ದರು, ಹಿಂದೆ ಅನೇಕ ಬಾರಿ ಅಧಿಕಾರದಲ್ಲಿದ್ದಾಗ ಕೈ ಚೆಲ್ಲಿ ಕೂತಿದ್ದರು. ತೈಲ ಬಿಕ್ಕಟ್ಟು ಎಲ್ಲ ದೇಶಗಳನ್ನು ಬಾಧಿಸುತ್ತಿದೆ. ಭಾರತದಲ್ಲಿ ತೈಲ ಉತ್ಪಾದನೆ ಆಗುತ್ತಿಲ್ಲ, ಬದಲಿಗೆ ಬೇರೆ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೆ, ರಾಷ್ಟ್ರದ ಹಿತ ದೃಷ್ಟಿಯಿಂದ ಪ್ರಧಾನಿಗಳು ಸಲಹೆ ನೀಡಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಸಣ್ಣತನದಿಂದ ಮಾತನಾಡುವುದು ಸರಿಯಲ್ಲ ಎಂದು ಸಚಿವ ಕುಮಾರಸ್ವಾಮಿ ಅವರು ಕಿಡಿಕಾರಿದರು.
ರಾಷ್ಟ್ರವು ಹಿಂದೆ ಇಂತಹ ಸಂಕಷ್ಟ ಸಂದರ್ಭಗಳಿಗೆ ಸಿಕ್ಕಿದಾಗೆಲ್ಲ ಕಾಂಗ್ರೆಸ್ ಪಕ್ಷ ಹೇಗೆಲ್ಲಾ ವರ್ತಸಿದೆ ಎಂಬುದನ್ನು ನೋಡಿದ್ದೇವೆ. ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ ಹೇಳುವುದು ಇಷ್ಟೇ, ನೀವು ಪದೇ ಪದೇ ರಾಜ್ಯದ ಜಿಡಿಪಿಯನ್ನು ಕೇಂದ್ರದ ಜಿಡಿಪಿಗೆ ಹೋಲಿಕೆ ಮಾಡುವುದನ್ನು ಬಿಟ್ಟು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ. ತಲಾ ಆದಾಯದಲ್ಲಿ ರಾಜ್ಯವು ಮುಂದೆ ಇದೆ ಎಂದು ಮುಖ್ಯಮಂತ್ರಿಗಳು ಹೇಳಿಕೊಳ್ಳುತ್ತಾರೆ. ಆ ಮಾನದಂಡದಲ್ಲಿ ನಾವು ರಾಜ್ಯದ ಅಭಿವೃದ್ಧಿಯನ್ನು ಅಳೆಯಲು ಆಗುವುದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೋಡಿದರೆ ಜನ ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ಮೂರು ವರ್ಷ ಹಾಳು ಮಾಡಿಕೊಂಡಿದ್ದಾರೆ. ಆ ತೆರಿಗೆ ಈ ತೆರಿಗೆ ಅಂತ ಹಾಕಿ ಬೆಂಗಳೂರು ಜನರನ್ನು ಕಿತ್ತು ತಿನ್ನುತ್ತಿದ್ದಾರೆ. ಈಗ ವೋಟು ಕೇಳಲು ಹೋದರೆ ಬೆಂಗಳೂರು ಜನ ಏನು ಮಾಡುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ, ಹೀಗಾಗಿ ಜಿಬಿಎ ಚುನಾವಣೆ ನಡೆಸಲು ಹೆದರುತ್ತಿದ್ದಾರೆ ಎಂದು ಟೀಕಿಸಿದರು.
ನೀಟ್ ಪರೀಕ್ಷೆ ಬಗ್ಗೆ ಮಾತನಾಡುವ ಯೋಗ್ಯತೆ ರಾಜ್ಯ ಸರಕಾರಕ್ಕಿಲ್ಲ, ರಾಜ್ಯದಲ್ಲಿ ಅನೇಕ ಸಲ ಪ್ರಶ್ನೆಪತ್ರಿಕೆಗಳು ಲೀಕ್ ಆಗಿದ್ದವು,ಆವಾಗೆಲ್ಲ ಪರೀಕ್ಷೆಗಳನ್ನು ಮುಂದಕ್ಕೆ ಹಾಕಿದ್ದರ ಎಂದು ಹೆಚ್ ಡಿ ಕೆ ಪ್ರಶ್ನಿಸಿದರು.
