ಬೆಂಗಳೂರು: ಕರ್ನಾಟಕ ಎರಡನೇ ಮಹಿಳಾ ರಾಜ್ಯಪಾಲರನ್ನು ಪಡೆದಿದ್ದು ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನವಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ನಡೆದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರ ಸ್ವಾಗತ ಹಾಗೂ ನಿಕಟಪೂರ್ವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ಈ ಮೊದಲು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ರಮಾದೇವಿಯವರೊಂದಿಗೆ ಕೆಲಸ ಮಾಡಿದ್ದೇವೆ. ಈಗ ಡಾ. ಸುಧಾ ಯಾದವ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿದೆ. ಹೊಸ ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ. ಜನ್ಮದಿನದಂದೇ ಅವರು ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ ಎಂದು ಸಿಎಂ ಶುಭ ಹಾರೈಸಿದರು.
ನಿಕಟ ಪೂರ್ವ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರೊಂದಿಗೆ ಐದು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರು ನಮ್ಮೊಂದಿಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ತನ್ನ ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಗೆಹ್ಲೋಟ್ ಅವರ ಅವಧಿಯಲ್ಲಿ ಅವರಿಗೆ ರಾಜ್ಯದ ಉತ್ತಮ ಆಡಳಿತ, ಸಂಸ್ಕೃತಿ, ಪರಂಪರೆ ಹಾಗೂ ರಾಜ್ಯದ ಜನರ ಕುರಿತು ಪರಿಚಯವಾಗಿದೆ. ಇಂದು ಅವರು ಅಧಿಕಾರವನ್ನು ಡಾ. ಸುಧಾ ಯಾದವ್ ಅವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬವಾಗಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸಬೇಕು ಎಂದು ಸಿಎಂ ನೂತನ ರಾಜ್ಯಪಾಲರನ್ನು ಆಹ್ವಾನಿಸಿದರು.
ಗೆಹ್ಲೋಟ್ ಅವರನ್ನು ಅನೇಕ ವಿಷಯಗಳ ಬಗ್ಗೆ ನಾವು ಸಾಕಷ್ಟು ತೊಂದರೆ ನೀಡಿದ್ದರೂ ಅವರು ಸರ್ಕಾರಕ್ಕೆ ಬೆಂಬಲ ನೀಡಿದ್ದಲ್ಲದೆ, ರಾಜ್ಯದ ಜನರ ಜೀವನ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಿದ್ದಾರೆ, ಕರ್ನಾಟಕ ಆರ್ಥಿಕ, ತಾಂತ್ರಿಕ, ಉತ್ತಮ ಆಡಳಿತ ಸೇರಿದಂತೆ ಎಲ್ಲಾ ವಲಯಗಳಲ್ಲಿಯೂ ದೇಶಕ್ಕೆ ಬಹುದೊಡ್ಡ ಶಕ್ತಿ ಮತ್ತು ಕೊಡುಗೆ ನೀಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯದ ಅಧಿಕಾರಿ ವರ್ಗ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಆಡಳಿತ ವ್ಯವಸ್ಥೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ, ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದು ಸಿಎಂ ಹೇಳಿದರು.
