ಮೈಸೂರು: ಮೈಸೂರು ದಸರಾ ಪ್ರಯುಕ್ತ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಪಿ ಕಾಳಿಂಗ ರಾವ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಯೋಗಾಸನ ಸ್ವರ್ಧೆ ಹಮ್ಮಿಕೊಳ್ಳಲಾಯಿತು.
ಸ್ಪರ್ಧೆಗೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು,
ಯೋಗಕ್ಕೆ ಜಾತಿ, ಧರ್ಮ ಹಾಗೂ ವಯಸ್ಸಿನ ಯಾವುದೇ ಅಂತರವಿಲ್ಲ. ಯಾವುದೇ ವಯಸ್ಸಿನವರು ಬೇಕಾದರೂ ಯೋಗವನ್ನು ಮಾಡಬಹುದು ಎಂದು ಹೇಳಿದರು.
ಮೈಸೂರಿನಲ್ಲಿ ಅನೇಕ ಯೋಗ ಬಂಧುಗಳು ಹಾಗೂ ಶಿಕ್ಷಕರು ಉಚಿತವಾಗಿ ಯೋಗವನ್ನು ಹೇಳಿಕೊಡುತ್ತಾ ಸಮಾಜವನ್ನು ಆರೋಗ್ಯವಂತರನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ಸರ್ಕಾರವು ಅತ್ಯಂತ ಉತ್ತಮ ರೀತಿಯಲ್ಲಿ ದಸರಾ ಕಾರ್ಯಕ್ರಮದ ಮುಖಾಂತರ ಯೋಗವನ್ನು ಹಾಗೂ ಯೋಗದಸರವನ್ನು ಹಮ್ಮಿಕೊಂಡು, ಇದರ ಮುಖಾಂತರ ರಾಜ್ಯಮಟ್ಟದ ಸಂದೇಶವನ್ನು ನೀಡಲು ಆನ್ಲೈನ್ ರಿಜಿಸ್ಟ್ರೇಷನ್ ಮೂಲಕ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ತಿಳಿಸಿದರು.
ಮೈಸೂರು ಎಂದರೇ ಅರಮನೆ, ಗುರುಮನೆ, ಯೋಗಮನೆ. ಮೈಸೂರು ನಗರವು ಯೋಗಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ರಾಜಾಶ್ರಯದಿಂದ ಹಿಡಿದು ಕಳೆದ 12 ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಯೋಗ ದಸರ ಉಪ ಸಮಿತಿ ಹಾಗೂ ಉಪ ವಿಶೇಷ ಅಧಿಕಾರಿಯಾದ ರಮ್ಯಾ ಕೆ ಅವರು ಮಾತನಾಡಿ,ಸ್ಪರ್ಧೆಯಲ್ಲಿ ಬಹುಮಾನಗಳು ಕೆಲವರಿಗೆ ಮಾತ್ರ ಸಿಗುತ್ತದೆ, ಆದರೆ ಬಹುಮಾನ ಸಿಗದಿದ್ದರೆ ಸೋತಿದ್ದೀರಿ ಎಂದರ್ಥವಲ್ಲ. ಪದಕ ಒಂದು ಸಂಭ್ರಮವಾದರೆ, ಯೋಗಾಭ್ಯಾಸವು ಜೀವನಪೂರ್ತಿ ಆರೋಗ್ಯ, ಶಿಸ್ತು, ಸಂಯಮ ಮತ್ತು ಮನಶಾಂತಿಯನ್ನು ನೀಡುತ್ತದೆ. ಸೋಲು ಎಂಬುದು ಕೊನೆಯಲ್ಲ, ಅದು ಕಲಿಯುವ ಮತ್ತೊಂದು ಘಟ್ಟ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಆಯುಬ್ ಖಾನ್, ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್, ಕಾರ್ಯಾಧ್ಯಕ್ಷರಾದ ನಿರೂಪ್ ವೆಸ್ಲಿ, ಕಾರ್ಯದರ್ಶಿಯಾದ ಡಾ. ರೇಣುಕಾ ದೇವಿ ಸಿ, ಮೈಸೂರು ಯೋಗ ಕೂಟದ ಅಧ್ಯಕ್ಷರಾದ ರಮೇಶ್, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷರಾದ ಪಶುಪತಿ, ಯೋಗ ದಸರಾ ಉಪಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
