ಬೆಂಗಳೂರು: ರಾಜ್ಯ ಸರಕಾರ ಬಸ್ ಪ್ರಯಾಣ ದರವನ್ನು ಶೇ.25ರಷ್ಟು ಹೆಚ್ಚಿಸಲು ಮುಂದಾಗಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದ್ದಾರೆ.
ಯಾವುದೇ ವೈಜ್ಞಾನಿಕ ಪರಿಶೀಲನೆ ನಡೆಸದೆ, ಸಮರ್ಪಕ ಆರ್ಥಿಕ ಯೋಜನೆ ರೂಪಿಸದೆ ಅಂದಾಜು ಆಧಾರಿತ ಘೋಷಣೆಗಳನ್ನು ಮಾಡುವ ಮೂಲಕ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಗೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರ, ಜನವಿರೋಧಿ ಕ್ರಮ ಅನುಸರಿಸಿದೆ ಎಂದು ಜಗದೀಶ್ ವಿ. ಸದಂ ದೂರಿದ್ದಾರೆ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯ ನೆಪದಲ್ಲಿ ಪದೇಪದೇ ಸಾರಿಗೆ ದರ ಹೆಚ್ಚಿಸುವುದು ಸರ್ಕಾರದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನವಾಗಿದೆ. ಯೋಜನೆಯ ವೆಚ್ಚವನ್ನು ಸಮರ್ಪಕವಾಗಿ ಭರಿಸುವ ಬದಲು ಅದರ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಲೆ ಏರಿಕೆ, ದುಬಾರಿ ಜೀವನ ವೆಚ್ಚ ಮತ್ತು ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಹೊರೆ ಹೇರುವುದು ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಜಗದೀಶ್ ಟೀಕಿಸಿದರು.
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಶೇ.50ಕ್ಕೂ ಹೆಚ್ಚು ಬಸ್ಗಳನ್ನು ಸ್ಥಗಿತಗೊಳಿಸಲಾಗಿದ್ದು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಮತ್ತು ಉದ್ಯೋಗಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ, ಬೆಂಗಳೂರು ನಗರದಲ್ಲಿ ಟಾಟಾ ಸಂಸ್ಥೆಯೊಂದಿಗಿನ ಒಪ್ಪಂದಗಳಿಂದ ಸಾರಿಗೆ ನಿಗಮಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇಂತಹ ಗಂಭೀರ ಸಮಸ್ಯೆಗಳನ್ನು ಪರಿಹರಿಸದೆ ಪ್ರಯಾಣ ದರ ಹೆಚ್ಚಿಸಲು ಮುಂದಾಗಿರುವುದು ಸರ್ಕಾರದ ಆಡಳಿತ ವೈಫಲ್ಯವಾಗಿದೆ ಎಂದು ಜಗದೀಶ್ ವಿ. ಸದಂ ಆರೋಪಿಸಿದರು.
ಸಾರಿಗೆ ನಿಗಮಗಳಲ್ಲಿನ ಭ್ರಷ್ಟಾಚಾರ, ಅನಗತ್ಯ ವೆಚ್ಚ ಮತ್ತು ಅಸಮರ್ಪಕ ನಿರ್ವಹಣೆಗೆ ಕಡಿವಾಣ ಹಾಕಬೇಕು. ಖರೀದಿ ಹಾಗೂ ಖಾಸಗಿ ಸಂಸ್ಥೆಗಳೊಂದಿಗಿನ ಒಪ್ಪಂದಗಳನ್ನು ಸಮಗ್ರವಾಗಿ ಪರಿಶೀಲಿಸಿ, ನಿಗಮಗಳ ಆದಾಯ-ವೆಚ್ಚದ ಶ್ವೇತಪತ್ರ ಬಿಡುಗಡೆ ಮಾಡಬೇಕು. ಸ್ಥಗಿತಗೊಂಡ ಗ್ರಾಮೀಣ ಬಸ್ ಸೇವೆಗಳನ್ನು ಪುನರಾರಂಭಿಸಬೇಕು. ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಬರಬೇಕಾದ ಅನುದಾನವನ್ನು ಕಾಲಮಿತಿಯಲ್ಲಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ತಿವಾರಿ ಸಮಿತಿಯ ಶೇ.25ರಷ್ಟು ದರ ಏರಿಕೆ ಶಿಫಾರಸನ್ನು ಸಂಪೂರ್ಣ ತಿರಸ್ಕರಿಸಿ, ಜನರ ಜೇಬಿಗೆ ಕತ್ತರಿ ಹಾಕುವುದನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಜಗದೀಶ್ ವಿ. ಸದಂ ಒತ್ತಾಯಿಸಿದರು.
