ಕಾಠ್ಮಂಡು: ನೇಪಾಳ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಹಾಗೂ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಅವರನ್ನು ಬಂಧಿಸಲಾಗಿದೆ.
ಕಳೆದ ವರ್ಷ ನಡೆದ ಭ್ರಷ್ಟಾಚಾರ ವಿರೋಧಿ ಜೆನ್ ಜಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 77 ಜನರ ಮೃತಪಟ್ಟಿದ್ದರು.ಆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಲಿ ಅವರನ್ನು ಬಂಧಿಸಲಾಗಿದೆ.
ಒಲಿ ಅವರೊಂದಿಗೆ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಿಶೇಷ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಗೌರಿ ಬಹದ್ದೂರ್ ಕಾರ್ಕಿ ನೇತೃತ್ವದ ತನಿಖಾ ಸಮಿತಿ ನೀಡಿದ ಶಿಫಾರಸಿನ ಮೇರೆಗೆ ಒಲಿ ಅವರನ್ನು ಬಂಧಿಸಲಾಗಿದೆ.
ಪ್ರತಿಭಟನಾಕಾರರ ಮೇಲೆ ಅತಿಯಾದ ಮತ್ತು ಅನಿಯಂತ್ರಿತ ಬಲಪ್ರಯೋಗ ಮಾಡಿದ್ದಲ್ಲದೆ, ಹಿಂಸಾಚಾರವನ್ನು ತಡೆಯುವಲ್ಲಿ ಒಲಿ ಸರ್ಕಾರ ವಿಫಲವಾಗಿತ್ತು ಎಂದು ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
