ಬೆಂಗಳೂರು: ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಯುವ ಘಟಕದ ಸದಸ್ಯರು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನವಕ್ಕೆ ಚಾಲನೆ ನೀಡಿದರು.
ಅಭಿಯಾನಕ್ಕೆ ನಗರದ ಆರ್.ಸಿ. ಕಾಲೇಜಿನ ಬಳಿ ಚಾಲನೆ ನೀಡಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಮಾತನಾಡಿ,ಅತ್ಯಂತ ದುಬಾರಿ ವೆಚ್ಚದ ನಮ್ಮ ಮೆಟ್ರೋ ದಿಂದಾಗಿ ವಿದ್ಯಾರ್ಥಿ ಸಮೂಹ ಸಂಪೂರ್ಣ ಮೆಟ್ರೋ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಸಂಚಾರ ಒತ್ತಡಗಳಿಂದಾಗಿ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಸಾಕಷ್ಟು ಪರದಾಡುತ್ತಿದ್ದಾರೆ,ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವು ಸಹ ಕುಸಿಯುತ್ತಿದ್ದು, ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕಾಗಿ ಸರ್ಕಾರವನ್ನು ಒತ್ತಾಯಿಸಲು ನಾವು ಲಕ್ಷಾಂತರ ವಿದ್ಯಾರ್ಥಿ ಸಮೂಹಗಳಿಂದ ಸಹಿ ಸಂಗ್ರಹ ಅಭಿಯಾನವನ್ನು ನಡೆಸುತ್ತಿದ್ದೇವೆ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳ ಬೇಕು ಈ ಕೂಡಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಧಾವಿಸ ಸಬೇಕು ಎಂದು ಒತ್ತಾಯಿಸಿದರು.
ಯುವ ಘಟಕದ ಉಪಾಧ್ಯಕ್ಷ ಉಮೇಶ್ ಗೌಡ ಮಾತನಾಡಿ,ನಾವು ಸತತವಾಗಿ ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳ ಬಳಿ ತೆರಳಿ ಸರ್ಕಾರದ ಮೇಲೆ ಒತ್ತಡ ತರಲು ಸಹಿ ಸಂಗ್ರಹಣೆ ಮಾಡುತ್ತಿದ್ದೇವೆ, ವಿದ್ಯಾರ್ಥಿ ಸಮೂಹ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದಾರೆ,ಎಲ್ಲರೂ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಬೇಕು,ಪಕ್ಷಾತೀತವಾಗಿ ಎಲ್ಲ ನಾಯಕರು ವಿದ್ಯಾರ್ಥಿಗಳ ಅನುಕೂಲಕ್ಕೆ ಕೂಡಲೇ ಭಾವಿಸಬೇಕು ಎಂದು ಮನವಿ ಮಾಡಿದರು.
ಅಭಿಯಾನದಲ್ಲಿ ಪಕ್ಷದ ಯುವ ಘಟಕದ ಬೆಂಗಳೂರು ನಗರಾಧ್ಯಕ್ಷ ಓಂಕಾರ್ ಮಂಜುನಾಥ್ , ಮುಖಂಡರುಗಳಾದ ನವೀನ್ ಅಯ್ಯರ್, ಇಂದು, ಭಾನುಪ್ರಿಯ, ರೋಹಿತ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
