
ಮೈಸೂರು: ಮೈಸೂರು ನಗರ ಪಾಲಿಕೆಯಲ್ಲಿ ಅದೆಷ್ಟು ಬೇಜವಾಬ್ದಾರಿ ಅಧಿಕಾರಿಗಳು ಇದ್ದಾರೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇದೆ.
ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿ ಐದು ವರ್ಷಗಳ ಕಾಲ ಒಂದು ಕುಟುಂಬವನ್ನು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವಂತೆ ಪಾಲಿಕೆಯವರು ಮಾಡಿಬಿಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹೊಣಕನಪುರ ಗ್ರಾಮದ ಗುರುಸ್ವಾಮಿ ಎಸ್ ಬಿನ್ ಶಿವಣ್ಣಾಚಾರಿ ಎಂಬುವರಿಗೆ ಪಾಲಿಕೆ ಅಧಿಕಾರಿಗಳು ತಪ್ಪಾಗಿ ಮರಣ ಪ್ರಮಾಣ ಪತ್ರ ವಿತರಿಸಿದ್ದರು.
14-04-2021 ರಂದು ಗುರುಸ್ವಾಮಿಯವರ ತಂದೆ ಶಿವಣ್ಣಾಚಾರಿ ಮರಣ ಹೊಂದಿದ್ದು, ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ನಮೂನೆ-2ರಲ್ಲಿ ಮೃತರ ಹೆಸರಿನ ಬದಲು ಅರ್ಜಿದಾರರಾದ ಗುರುಸ್ವಾಮಿಯವರ ಹೆಸರನ್ನು ನಮೂದಿಸಿ ದೊಡ್ಡ ಎಡವಟ್ಟು ಮಾಡಿದ್ದಾರೆ.
ಇದರಿಂದಾಗಿ ಗುರುಸ್ವಾಮಿ ಎಸ್ ಅವರ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ರದ್ದಾಗಿದ್ದು, ಕಳೆದ ಐದು ವರ್ಷಗಳಿಂದ ಸರ್ಕಾರಿ ಸೌಲಭ್ಯಗಳಿಂದ ಅವರು ವಂಚಿತರಾಗಿದ್ದಾರೆ.
ತಪ್ಪಿನ ಅರಿವಾಗಿ ಜನನ-ಮರಣ ಉಪನೋಂದಣಾಧಿಕಾರಿಗಳು 22-07-2021 ರಂದೇ ಮೇಲಾಧಿಕಾರಿಗಳಿಗೆ ಪತ್ರ ಬರೆದು ತಪ್ಪಾಗಿ ನೋಂದಾಯಿಸಲಾದ ಮರಣ ನೋಂದಣಿ ಸಂಖ್ಯೆ 803194/ಟಿ/ಡಿ/2021/007873 ರದ್ದುಪಡಿಸುವಂತೆ ಕೋರಿದ್ದರು.ಆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಸಂತ್ರಸ್ತ ಕುಟುಂಬ ಐದು ವರ್ಷಗಳಿಂದ ಪಾಲಿಕೆಗೆ ಅಲೆದಾಡಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸಲಿಲ್ಲ.ಕೊನೆಗೆ ಕರ್ನಾಟಕ ರೈತ ಸಂಘದ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ ನಂತರ ಅಧಿಕಾರಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್, ರಘು ಇಮ್ಮಾವು, ಅಹಲ್ಯ ನಂಜುಂಡ, ದೇವರಾಜು, ಕುಮಾರ್ ಬಸಪ್ಪ, ಶ್ವೇತಾ, ರತ್ನಮ್ಮ, ಮಾದೇವ ನಾಯಕ, ಸಂತ್ರಸ್ತ ಗುರುಸ್ವಾಮಿ ಅವರ ಪತ್ನಿ ಪ್ರೇಮ ಸೇರಿದಂತೆ ಹಲವರು ಭಾಗವಹಿಸಿದ್ದರು.
