ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ 77ನೇ ಗಣರಾಜೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ರವರು, ಎನ್.ಸಿ.ಸಿ. ಕೆಡಟ್ಗಳಿಂದ ಗೌರವ ವಂದನೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಲಲಿತಕಲಾ ಕಾಲೇಜು, ಯುವರಾಜ ಕಾಲೇಜು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಮತ್ತು ನಾಡಗೀತೆಗಳನ್ನು ಹಾಡಿದರು.
ನಂತರ ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ಅವರು ಮಾತನಾಡಿ, ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುವ ಗಣರಾಜ್ಯೋತ್ಸವವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ಮೌಲ್ಯಗಳ ದ್ಯೋತಕವಾಗಿದೆ, ಗಣರಾಜ್ಯೋತ್ಸವವು ನಾಗರೀಕರಿಗೆ ಅವರ ಹಕ್ಕುಗಳ ಜೊತೆಗೆ ಅವರ ಕರ್ತವ್ಯಗಳನ್ನು ನೆನಪಿಸುತ್ತದೆ ಎಂದು ಅವರು ತಿಳಿಸಿದರು.
ಭಾರತೀಯ ಸಂವಿಧಾನವು ಈ ದೇಶದ ವಿಶಾಲ ವೈವಿಧ್ಯತೆಗೆ, ಏಕೀಕೃತ ಚೌಕಟ್ಟನ್ನು ಒದಗಿಸುತ್ತದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ಗಣರಾಜ್ಯೋತ್ಸವವು ವಸಾಹತುಶಾಹಿ ಅಧೀನತೆಯ ಮೇಲೆ ಪ್ರಜಾಪ್ರಭುತ್ವದ ಆದರ್ಶಗಳ ವಿಜಯವನ್ನು ಸಂಕೇತಿಸುತ್ತದೆ ಎಂದು ಹೇಳಿದರು.
ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವೆಂಬ ಅಸ್ಮಿತೆಯನ್ನು ದೃಢಪಡಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ರವರು ಈ ಮಹೋನ್ನತ ಸಂವಿಧಾನದ ಮುಖ್ಯ ಶಿಲ್ಪಿ. ಅವರು ಸಾಮಾಜಿಕ ನ್ಯಾಯ ಮತ್ತು ದಮನಿತರ ಸಬಲೀಕರಣವನ್ನು ಬಲವಾಗಿ ಪ್ರತಿಪಾದಿಸಿದರು ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣವನ್ನು, ವಿಮೋಚನೆ ಮತ್ತು ಪ್ರಗತಿಗೆ ಪ್ರಬಲ ಸಾಧನವೆಂದು ಪರಿಗಣಿಸಿದ್ದರು. ಪ್ರಜಾಪ್ರಭುತ್ವವು, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯಲ್ಲಿ ಬೇರೂರಿರ ಬೇಕೆಂದು ಅವರು ದೃಢವಾಗಿ ನಂಬಿದ್ದರು. ಸಾಂವಿಧಾನಿಕ ನೈತಿಕತೆಯ ಕುರಿತಾದ ಅವರ ಒತ್ತಾಯವು ಇಂದಿಗೂ ಬಹಳ ಪ್ರಸ್ತುತವಾಗಿದೆ ಎಂದು ಕುಲಪತಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ಮಾನ್ಯ ಕುಲಸಚಿವರಾದ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎನ್. ನಾಗರಾಜ, ಸಿಂಡಿಕೇಟ್ ಸದಸ್ಯರುಗಳು, ಶೈಕ್ಷಣಿಕ ಮಂಡಳಿ ಸದಸ್ಯರುಗಳು, ಎಲ್ಲಾ ನಿಕಾಯ ಡೀನರುಗಳು, ನಿರ್ದೇಶಕರುಗಳು, ಪ್ರಾಂಶುಪಾಲರುಗಳು, ವಿಭಾಗಗಳ ಮುಖ್ಯಸ್ಥರುಗಳು, ಅಧ್ಯಾಪಕರುಗಳು, ಅಧ್ಯಾಪಕೇತರರುಗಳು, ಸಂಶೋಧಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶಕರಾದ ಪ್ರೊ. ಗುರುಸಿದ್ದಯ್ಯ ಸಿ, ಡಾ. ಸುಷ್ಮಾ ಎಸ್.ಎನ್. ಹಾಗೂ ನಿರ್ದೇಶನಾಲಯದ ಸಿಬ್ಬಂದಿ ಹಾಜರಿದ್ದರು.
