ಮೈಸೂರು: ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ 57ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ಸಂಚಿಕೆಯ ಲೋಕಾರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪತ್ರಿಕೆಯ ಪ್ರಧಾನ ಗೌರವ ಸಂಪಾದಕರಾದ ವಿದ್ವಾನ್ ಡಾ. ಎಚ್.ವಿ. ನಾಗರಾಜ ರಾವ್ ಅವರು ಮಾತನಾಡಿ, ಈ ಪತ್ರಿಕೆಯು ಸಂಸ್ಕೃತ ಪ್ರಸಾರಕ್ಕಾಗಿ ಇಷ್ಟೊಂದು ಸುದೀರ್ಘ ಕಾಲ ಸೇವೆಯನ್ನು ಸಮರ್ಪಿಸುತ್ತಾ ಮುನ್ನಡೆಯುತ್ತಿದೆ. ವಿಶ್ವದಾದ್ಯಂತ ಸಂಸ್ಕೃತ ಭಾಷೆಯು ಬೆಳಗುತ್ತಿದೆ ಎಂದು ಹೇಳಿದರು.
ಸಂಸ್ಕೃತ ಭಾಷೆಯನ್ನು ಎಲ್ಲರೂ ಅಭ್ಯಾಸ ಮಾಡಬೇಕು. ಅದರ ಮೂಲಕ ನಮ್ಮ ದೇಶದ ಸಂಸ್ಕೃತಿ, ಜ್ಞಾನ ಮತ್ತು ಧರ್ಮವನ್ನು ತಿಳಿದುಕೊಳ್ಳಬೇಕು. ಸಂಸ್ಕೃತ ಭಾಷೆಯ ಪ್ರಸಾರ ಹಾಗೂ ಪ್ರಕಟಣೆಗಾಗಿ ಎಲ್ಲರೂ ಸಹಕಾರ ನೀಡಬೇಕು. ಅತ್ಯದ್ವಿತೀಯವಾದ ಈ ಪತ್ರಿಕೆಯ ಉಳಿವಿಗಾಗಿ ಎಲ್ಲಾ ಸಾಮಾಜಿಕರು, ವಿದ್ವಾಂಸರು ಹಾಗೂ ಅಭಿಮಾನಿಗಳು ಸಹಕಾರ ನೀಡಿ ಈ ಪತ್ರಿಕೆಯನ್ನು ರಕ್ಷಿಸಬೇಕು ಎಂದು ಅವರು ಕರೆ ನೀಡಿದರು.
ನಮ್ಮ ದೇಶದ ಧರ್ಮ ಹಾಗೂ ಸಂಸ್ಕೃತಿಯ ವಿಷಯಗಳನ್ನು ಭಾರತೀಯರಾದ ನಾವೇ ಹೇಳಬೇಕು, ಇದು ನಮ್ಮ ಕರ್ತವ್ಯ, ನಾವೇ ನಮ್ಮ ಮನೋಬಲದಿಂದ ನಮ್ಮ ಧಮನಿಗಳಲ್ಲಿ ಪ್ರವಹಿಸುತ್ತಿರುವ ಭಾರತೀಯ ರಕ್ತವನ್ನು, ವಿಶೇಷವಾಗಿ ಋಷಿಮುನಿಗಳ ರಕ್ತವನ್ನು ಅರಿತು ಸಂಸ್ಕೃತದ ರಕ್ಷಣೆಯನ್ನು ಮಾಡಬೇಕು ಎಂದು ಡಾ. ನಾಗರಾಜ ರಾವ್ ಸಲಹೆ ನೀಡಿದರು
ಆಚಾರ್ಯತ್ರಯರಾದ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರು ಸಂಸ್ಕೃತ ಭಾಷೆಯ ಮೂಲಕವೇ ಜ್ಞಾನಪ್ರಸಾರ, ದೇಶರಕ್ಷಣೆ ಹಾಗೂ ಧರ್ಮಪ್ರಸಾರವನ್ನು ಮಾಡಿದರು ಎಂದು ಅವರು ಸ್ಮರಿಸಿದರು.
ಮೈಸೂರಿನ ಪರಾಶರ ಗುರುಕುಲದ ಸಂಸ್ಥಾಪಕರು ಮತ್ತು ಕುಲಪತಿಗಳಾದ ಉ.ವೇ. ವೀರರಾಘವಾಚಾರ್ಯ ಅವರು 57ನೇ ಸಂಸ್ಥಾಪನಾ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು.
ಸಂಸ್ಕೃತದ ಮಹಿಮೆ ಹಾಗೂ ಅದರ ಮೂಲಕ ಜನರಿಗೆ ದೇಶದ ಮೇಲಿರುವ ಕರ್ತವ್ಯಗಳನ್ನು ಅವರು ಪ್ರಬೋಧಿಸಿದರು. “ಗುರುಕುಲದಲ್ಲಿ ವೇದಗಳ, ಶಾಸ್ತ್ರಗಳ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇವೆ. ಇಲ್ಲಿ ಮಹಿಳೆಯರು ಆಳ್ವಾರ್ ದಿವ್ಯ ಪ್ರಬಂಧಗಳನ್ನು ಪಠಿಸಿ ಭಾಷೆಯ ಪ್ರಭಾವವನ್ನು ಪ್ರಕಟಿಸಿದ್ದಾರೆ. ಸುಧರ್ಮಾ ಪತ್ರಿಕೆಯು ಜಗತ್ತಿನಾದ್ಯಂತ ಸಂಚರಿಸುತ್ತಾ ಸಂಸ್ಕೃತ ಭಾಷೆಯ ಮೂಲಕ ನಮ್ಮ ದೇಶದ ಜ್ಞಾನ, ಧರ್ಮ, ಆಚಾರ ಹಾಗೂ ವಿಚಾರಗಳನ್ನು ಪ್ರಕಟಿಸುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಸಮಾರಂಭದಲ್ಲಿ ಪತ್ರಿಕೆಯ ಪಯಣದಲ್ಲಿ ಕೊಡುಗೆ ನೀಡಿದ ವಿದ್ವಾಂಸರನ್ನು ಸ್ಮರಿಸಲಾಯಿತು. ಪಂಡಿತ ವರದರಾಜ ಅಯ್ಯಂಗಾರ್ ಅವರು ಪತ್ರಿಕೆಯನ್ನು ಸಂಸ್ಥಾಪಿಸಿ ಸಂಸ್ಕೃತ ಪ್ರಸಾರ ಮಾಡಿದರು. ನಂತರ ಅವರ ಪುತ್ರ ಕೆ.ವಿ. ಸಂಪತ್ ಕುಮಾರ್ ಅವರು 31 ವರ್ಷಗಳ ಕಾಲ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಆರಂಭದಿಂದಲೂ ಅನೇಕ ಸಂಸ್ಕೃತ ವಿದ್ವಾಂಸರು ಲೇಖನಗಳ ಮೂಲಕ ಪತ್ರಿಕೆಯನ್ನು ಬೆಳೆಸಿದ್ದಾರೆ. ಪ್ರಸ್ತುತ ವಿದ್ವಾನ್ ಡಾ. ಟಿ.ವಿ. ಸತ್ಯನಾರಾಯಣ, ವಿದ್ವಾನ್ ಡಾ. ವಿ.ಡಿ. ಹೆಗಡೆ, ವಿದ್ವಾನ್ ಡಾ. ಎಚ್.ಎಮ್. ಶಿಂಗಪ್ಪ, ವಿದ್ವಾನ್ ಶ್ರೀವತ್ಸಾಚಾರ್ಯ, ವಿದ್ವಾನ್ ಎಚ್.ಎಮ್. ಸುಧೀರ್ ಸೇರಿದಂತೆ ಹಲವರು ಲೇಖನ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ.
ಎಲ್ಲರೂ ಈ ಪತ್ರಿಕೆಯನ್ನು ಕೊಂಡು, ಓದಿ ಸಂಸ್ಕೃತ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು. ಪತ್ರಿಕೆಯ ಚಂದಾದಾರರಾಗಿ ಸಂಸ್ಕೃತಾಭಿಮಾನಿಗಳಾಗಿರಿ ಎಂದು ವಿದ್ವಾನ್ ಡಾ. ಟಿ.ವಿ. ಸತ್ಯನಾರಾಯಣ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ವಿ.ಡಿ. ಹೆಗಡೆ ಹಾಗೂ ವಿದ್ವಾನ್ ಡಾ. ಶಿಂಗಪ್ಪ ಅವರು ಉಪಸ್ಥಿತರಿದ್ದರು.
