ಮೈಸೂರು: ಸಂಶೋಧನಾ ಮಹಾಪ್ರಬಂಧಗಳು ಎಷ್ಟು ಪುಟಗಳಿಂದ ಕೂಡಿದೆ ಎಂಬುದು ಮುಖ್ಯವಲ್ಲ, ಅದು ಸಮಾಜದ ಮೇಲೆ ಬೀರುವ ಪರಿಣಾಮ ಬಹಳ ಮುಖ್ಯ ಎಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್. ಬಸವನಗೌಡಪ್ಪ ತಿಳಿಸಿದರು.
ನಗರದ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಡಾ. ರಾಜೇಂದ್ರ ಸಭಾಂಗಣದಲ್ಲಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಇಂಡೆಕ್ಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಎಚ್.ಡಿ ಕೇವಲ ಒಂದು ಪದವಿ ಪಡೆಯುವ ಪ್ರಕ್ರಿಯೆಯಲ್ಲ,ಹೊಸ ಜ್ಞಾನವನ್ನು ಅನ್ವೇಷಿಸುವ, ಮಾನವ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಹಿಡಿಯುವ ಬದ್ಧತೆಯಾಗಿದೆ ಎಂದು ತಿಳಿಸಿದರು.
ಪಿಎಚ್.ಡಿ ವಿದ್ಯಾರ್ಥಿಗಳು ಕೇವಲ ಸಂಶೋಧಕರಾಗಿರಬಾರದು. ಅವರು ಉತ್ತಮ ಸಂವಹನಕಾರರು, ನಾಯಕರು, ಸಮಸ್ಯೆ ಪರಿಹಾರಕರು, ನವೋದ್ಯಮಿಗಳು ಮತ್ತು ಜವಾಬ್ದಾರಿಯುತ ಜಾಗತಿಕ ನಾಗರಿಕರಾಗಬೇಕು ಎಂದು ಡಾ.ಎಚ್. ಬಸವನಗೌಡಪ್ಪ ಕಿವಿಮಾತು ಹೇಳಿದರು.
ನಾವೀನ್ಯತೆ ಇಲ್ಲದ, ಬೇರೆಯವರ ಕೆಲಸವನ್ನು ಅನುಸರಿಸುವ ಸಂಶೋಧನೆಗೆ ಅರ್ಥವಿಲ್ಲ. ಸಂಶೋಧನಾ ವಿದ್ಯಾರ್ಥಿಗಳು ದತ್ತಾಂಶ ಸಂಗ್ರಹಣೆ ಮತ್ತು ವರದಿಯಲ್ಲಿ ಪ್ರಾಮಾಣಿಕತೆ ಹೊಂದಬೇಕು. ಸಂಶೋಧನೆಯನ್ನು ಹೇಗಾದರೂ ಪೂರ್ಣಗೊಳಿಸಬೇಕೆಂಬ ಮನೋಭಾವ ಇರಬಾರದು ಎಂದು ತಿಳಿಹೇಳಿದರು.
ಸಿಎಫ್ಟಿಆರ್ಐ ವಿಜ್ಞಾನಿ ಡಾ. ನಂದಿನಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಜೆಎಸ್ಎಸ್-ಎಎಚ್ಇಆರ್ ಕುಲಸಚಿವ ಡಾ. ಬಿ. ಮಂಜುನಾಥ್, ಡೀನ್ ಡಾ. ವಿಶಾಲ್ ಕುಮಾರ್ ಗುಪ್ತ, ಅಂತಾರಾಷ್ಟ್ರೀಯ ಶೈಕ್ಷಣಿಕ ತಜ್ಞ ಎ.ಎಂ. ಸಾಗರ್ ಮತ್ತಿತರರು ಪಾಲ್ಗೊಂಡಿದ್ದರು.
