ಮೈಸೂರು: ಕತ್ತಲ ಬಾನಂಗಳದಲ್ಲೇ ಜೀವತಳೆದ ನವಿಲು, ಸಿಂಹ, ಚಾಮುಂಡೇಶ್ವರಿ, ಚಿನ್ನದ ಅಂಬಾರಿ…
ಈ ಮನಮೋಹಕ ದೃಶ್ಯಗಳು 3,500 ಡ್ರೋನ್ಗಳು ಸೃಷ್ಟಿಸಿದ ಬೆಳಕಿನ ಮಾಯಾಲೋಕದಲ್ಲಿ ಕಂಡುಬಂದಿತು.
ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನದಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನದ ಮೇಳೈಸಿತು.
ಬಾನಂಗಳಕ್ಕೆ ಏಕ ಕಾಲಕ್ಕೆ ಹಾರಿದ 3500 ಡ್ರೋನ್ಗಳು ಬಣ್ಣಬಣ್ಣದ ಎಲ್ಇಡಿ ದೀಪಗಳ ಬೆಳಕಿನಿಂದ 12 ವಿಭಿನ್ನ ವಿನ್ಯಾಸಗಳ ಚಿತ್ತಾರಗಳನ್ನು ಆಗಸದಲ್ಲಿ ಬಿಡಿಸಿ, ಇಡೀ ಮೈದಾನದಲ್ಲಿ ನೆರೆದಿದ್ದ ಜನರನ್ನು ಮಂತ್ರಮುಗ್ಧಗೊಳಿಸಿತು.
ದಸರೆಯ ಸಾಂಸ್ಕೃತಿಕ ವೈಭವಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಈ ಪ್ರದರ್ಶನವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಸ್ತ ಜನತೆಗೆ ದಸರಾ ಮಹೋತ್ಸವಕ್ಕೆ ಸ್ವಾಗತ ಕೋರುವ ವಿನ್ಯಾಸದೊಂದಿಗೆ ಈ ಬಾರಿಯ ಡ್ರೋನ್ ಶೋ ಆರಂಭಗೊಂಡಿತು. ನಂತರ ಒಂದರ ಹಿಂದೆ ಒಂದರಂತೆ ಆಕಾಶದಲ್ಲಿ ಮೂಡಿಬಂದ ಬೆಳಕಿನ ವಿನ್ಯಾಸಗಳು ಪ್ರೇಕ್ಷಕರಲ್ಲಿ ಬೆರಗು ಮೂಡಿಸಿದವು.
ಈ ಬಾರಿಯ ಪ್ರದರ್ಶನದಲ್ಲಿ ಗ್ಯಾಲಕ್ಸಿ, ದೇಶದ ಹೆಮ್ಮೆಯ ಸೈನಿಕ, ಆಕರ್ಷಕ ಚಿಟ್ಟೆ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ಕಾಡಿನ ರಾಜ ಸಿಂಹದ ವಿನ್ಯಾಸಗಳು ಗಮನ ಸೆಳೆದವು. ಅದರಲ್ಲೂ ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸದ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಸೆಸ್ಕ್ನ ಪ್ರಯತ್ನ ವಿಶೇಷ ಕುತೂಹಲ ಮೂಡಿಸಿತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಧಾರ್ಮಿಕ ಭಾವನೆ ಮೂಡಿಸಿದ ಸುದರ್ಶನ ಚಕ್ರ ಹಾಗೂ ಶಿವತಾಂಡವದ ದೃಶ್ಯಾವಳಿಗಳು ಪ್ರೇಕ್ಷಕರ ಮೈನವಿರೇಳಿಸಿತು.
ಮೈಸೂರಿನ ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಪರಂಪರೆ ಪ್ರತಿಬಿಂಬಿಸುವ ನಂದಿ ವಿಗ್ರಹ, ವಿಶ್ವವಿಖ್ಯಾತ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಮತ್ತು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ವಿನ್ಯಾಸಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದವು.
ಡ್ರೋನ್ ಪ್ರದರ್ಶನಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಖ್ಯಾತ ಗಾಯಕರಾದ ಇಂಧೂ ನಾಗರಾಜ್, ಶ್ರೀಹರ್ಷ, ವ್ಯಾಸರಾಜ್, ದಿವ್ಯ ರಾಮಚಂದ್ರ ಹಾಗೂ ಐಶ್ವರ್ಯ ರಂಗರಾಜನ್ ಅವರುಗಳು ತಮ್ಮ ಸುಮಧುರ ಕಂಠದ ಮೂಲಕ ಹಲವು ಗೀತೆಗಳನ್ನು ಪ್ರಸ್ತುಪಡಿಸುವ ಮೂಲಕ ಜನರಿಗೆ ಮುದನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಡ್ರೋನ್ ಶೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಶಾಸಕ ತನ್ವೀರ್ ಸೇಠ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ನಟಿ ಅನುಷಾ ರೈ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಅರ್ಚನ, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ಸೋಸಲೆ ಲಿಂಗಯ್ಯ, ಉಪಾಧ್ಯಕ್ಷರಾದ ಗುಣಶೇಖರ್, ಮೋಸಿನ್ ಖಾನ್, ಷಾಹಿನ್ ಷಾ ಅಹಮದ್, ಕೆ.ಎಸ್. ರವಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
