ಬೆಂಗಳೂರು: ಬೆಂಬಲ ಬೆಲೆಗಾಗಿ ಸಮಿತಿ ರಚನೆ ಸೇರಿದಂತೆ ಕಬ್ಬು ಬೆಳೆಗಾರರ ಪರ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ, ಅವರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ನಡೆದಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸ ಮಾಡಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆ ಬಗ್ಗೆ ತೀಮಾನ ಕೈಗೊಂಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದು, ಎಂಎಸ್ಪಿಗೆ ಸಂಬಂಧಿಸಿದಂತೆ ಆಯೋಗ ರಚಿಸಲಾಗಿದೆ, ಎನ್ಡಿಎ ಅಧಿಕಾರಕ್ಕೆ ಬಂದ ನಂತರ, ಯುಪಿಎ ಉಳಿಸಿಕೊಂಡಿದ್ದ 16,600 ಕೋಟಿ ರೂ. ಬಾಕಿಯನ್ನು ನೀಡಿದೆ. ಎಫ್ಆರ್ಪಿ ಮೊತ್ತವನ್ನು 30 ರಿಂದ 40 ರೂ. ಗೆ ಹೆಚ್ಚಿಸಿದ್ದು, 2026 ರಲ್ಲಿ 365 ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಥೆನಾಲ್ ಉತ್ಪಾದನೆಗೆ ಯುಪಿಎ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾನು ಸಾರಿಗೆ ಸಚಿವನಾಗಿದ್ದಾಗ ಮೂರು ನಾಲ್ಕು ಬಾರಿ ಮನವಿ ಮಾಡಿದರೂ ಅನುಮತಿ ನೀಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಾಹನಗಳಿಗೆ ಎಥೆನಾಲ್ ಬಳಸುವ ಕ್ರಾಂತಿಕಾರಿ ಸುಧಾರಣೆ ತಂದಿದೆ. ಹಿಂದೆ ಕೋಟ್ಯಂತರ ಪ್ಲಾಸ್ಟಿಕ್ ಬಾಟಲ್ಗಳ ಬಳಕೆಯಾಗುತ್ತಿತ್ತು. ಈಗ ಬಯೋಪ್ಲಾಸ್ಟಿಕ್ ತಯಾರಿಸುವ ಪ್ರಯತ್ನ ನಡೆದಿದ್ದು, ಕರ್ನಾಟಕದ ಕಬ್ಬು ಅರೆಯುವ ಫ್ಯಾಕ್ಟರಿಗಳಲ್ಲಿ ಮರುಬಳಕೆಯಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಆದಾಯ ಸಿಗುತ್ತಿದೆ. ಶೇ.27 ರಷ್ಟು ಸಕ್ಕರೆ ಉತ್ಪಾದನೆ ಜಾಸ್ತಿಯಾಗಿದೆ. ಆದರೂ ದರ ಇಳಿಕೆ ಮಾಡಿಲ್ಲ. ರಫ್ತನ್ನು 20 ಲಕ್ಷ ಟನ್ಗೆ ಹೆಚ್ಚಿಸಲಾಗಿದೆ. ಎಥೆನಾಲ್ ಮೊದಲು 38 ಕೋಟಿ ಲೀಟರ್ ಉತ್ಪಾದನೆಯಾಗುತ್ತಿದ್ದು, ಈಗ 1200 ಕೋಟಿ ಲೀಟರ್ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
ಒಂದೊಂದು ಕಾರ್ಖಾನೆಯಲ್ಲಿ ಒಂದೊಂದು ದರವಿದೆ. ತ್ಯಾಜ್ಯವನ್ನು ಹೆಚ್ಚಾಗಿ ತೋರಿಸಿ ವಂಚಿಸಲಾಗುತ್ತಿದೆ. ಬೆಳೆ ವಿಮೆ ಕೂಡ ಸರಿಯಾಗಿ ಸಿಗುತ್ತಿಲ್ಲ. ರೈತರಿಗೆ ನೆರವಾಗಲು ಲ್ಯಾಬ್ಗಳನ್ನು ರಾಜ್ಯ ಸರ್ಕಾರ ನಿರ್ಮಿಸಬೇಕು. ಬೇರೆ ರಾಜ್ಯಗಳಲ್ಲಿ ರಾಜ್ಯ ಸಲಹಾ ಬೆಲೆ ಇದೆ. ಆದರೂ ಇಲ್ಲಿ ಮಾತ್ರ ಇದನ್ನು ಜಾರಿ ಮಾಡಿಲ್ಲ. ರಾಜ್ಯ ಸರ್ಕಾರ ರೈತರಿಗೆ ನ್ಯಾಯ ಕೊಟ್ಟಿದ್ದರೆ ಅವರು ಬೀದಿಗೆ ಇಳಿಯುತ್ತಿರಲಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ಜೊತೆ ಮಾತಾಡುತ್ತಿದ್ದೇನೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಅವರು ದೆಹಲಿಯಲ್ಲೇ ಹೆಚ್ಚು ಸಮಯ ಕಳೆದಿದ್ದಾರೆ. ಈ ವಿಚಾರದಲ್ಲಿ ಅವರು ದೆಹಲಿಗೆ ಮಾತುಕತೆ ಮಾಡಲು ಹೋಗಿಲ್ಲ ಎಂದು ಅಶೋಕ ಆರೋಪಿಸಿದರು.
ಎಲ್ಲಕ್ಕೂ ದೆಹಲಿಗೆ ಹೋಗುವ ಸಿಎಂ ಡಿ.ಕೆ.ಶಿವಕುಮಾರ್, ಈಗಲೂ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಬೇಕು. ನಾನು ಸಚಿವನಾಗಿದ್ದಾಗ ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಪರಿಹರಿಸಲಾಗಿತ್ತು ಎಂದು ತಿಳಿಸಿದರು.
ಜಿಡಿಪಿ ಬೆಳವಣಿಗೆ ಬಹಳ ವೇಗವಾಗಿದೆ ಎಂದು ವಿವಿಧ ಸಮೀಕ್ಷೆಗಳು ಹೇಳಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಕಾಕ್ರೋಚ್ ಪಾರ್ಟಿ ಜೊತೆ ಸೇರಿ, ನೇಪಾಳದಲ್ಲಿ ಮಾಡಿದಂತೆ ದಂಗೆ ಮಾಡುತ್ತೇವೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಪ್ರಚೋದನೆ ಮಾಡಲಾಗುತ್ತಿದೆ. ಜಿರಳೆ ಪಾರ್ಟಿಗೆ ಬೇರೆ ದೇಶಗಳಿಂದ ಹಣ ಬರುತ್ತಿದೆ ಎಂಬ ಆರೋಪ ಇದೆ. ದೇಶದ ಮೇಲೆ ಕತ್ತಿ ಮಸೆಯುವವರಿಗೆ ಬೇರೆ ದೇಶದಲ್ಲಿ ತರಬೇತಿ ಸಿಕ್ಕಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜಿರಳೆ ಪಾರ್ಟಿಗೆ ಬೆಂಬಲವಿದೆ, ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಿ ಎಂದಿದ್ದಾರೆ. ಆರ್ಎಸ್ಎಸ್ ಹಾಗೂ ಬೇರೆ ಸಂಘಟನೆಗಳಿಗೆ ಮಾತ್ರ ಅನುಮತಿ ಬೇಕಾಗುತ್ತದೆ. ಈಗ ಕಾಂಗ್ರೆಸ್ನ ಕೈ ಚಿಹ್ನೆ ತೆಗೆದು ಜಿರಳೆ ಚಿತ್ರ ಹಾಕಿಕೊಳ್ಳುವುದು ಸೂಕ್ತ. ನ್ಯಾಷನಲ್ ಕಾಕ್ರೋಚ್ ಪಾರ್ಟಿ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದು ಅಶೋಕ ವ್ಯಂಗ್ಯ ಸಲಹೆ ನೀಡಿದರು.
ರಾಮನಗರದಲ್ಲಿ ಪ್ರತಿಭಟನೆ ಮಾಡುತ್ತಿರುವ ವಿಕಲಚೇತನರನ್ನು ಭೇಟಿ ಮಾಡಿದ್ದೆ. ಐದು ತಿಂಗಳಿಂದ ಅವರಿಗೆ ಮಾಸಾಶನ ನೀಡಿಲ್ಲ,ಅದಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ, ಆದರೆ ಪೊಲೀಸರು ಅವರನ್ನು ಬಂಧಿಸಿ ಲಾಠಿಪ್ರಹಾರ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಅವರ ಮಾಸಾಶನ ಬಿಡುಗಡೆ ಮಾಡಿ, ಬೇಡಿಕೆಗಳನ್ನು ಈಡೇರಿಸಬೇಕು,ಒಂದು ವೇಳೆ ಅವರು ಬೆಂಗಳೂರಿಗೆ ಪಾದಯಾತ್ರೆ ಮಾಡಿ ವಿಧಾನಸೌಧಕ್ಕೆ ಬಂದರೆ ಸರ್ಕಾರದ ಮಾನ ಹರಾಜಾಗುತ್ತದೆ ಎಂದು ಅಶೋಕ ಎಚ್ಚರಿಸಿದರು.
