ಕೊಲ್ಕತ್ತಾ: ಕೋಲ್ಕತ್ತಾದಲ್ಲಿ ಇಂದು ರಾತ್ರಿ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ, 17 ಭಕ್ತರು ಮೃತಪಟ್ಟಿದ್ದಾರೆ.
ಈ ಅವಘಡದಲ್ಲಿ 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು,ಹಲವರ ಸ್ಥಿತಿ ಗಂಭಿರವಾಗಿದೆ.
ಉತ್ತರ ಕೋಲ್ಕತ್ತಾದ ಗಿರೀಶ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ‘ಚೋರ್ ಬಗಾನ್ ಸಾರ್ವಜನಿಕ ಪೂಜಾ ಪೆಂಡಾಲ್ನ ನಿರ್ಗಮನ ದ್ವಾರದ ಬಳಿ ಸಂಜೆ ಸುಮಾರು 7:40 ಕ್ಕೆ ಈ ದುರಂತ ಸಂಭವಿಸಿದೆ.
ಸಪ್ತಮಿ ದಿನವಾದ ಶನಿವಾರ ಸಂಜೆ ಪೆಂಡಾಲ್ ವೀಕ್ಷಣೆಗೆ ಭಾರಿ ಜನಸಂದಣಿ ನೆರೆದಿತ್ತು. ಈ ವೇಳೆ ದಿಢೀರನೆ ಭಾರಿ ಮಳೆ ಮತ್ತು ಸಿಡಿಲು ಶುರುವಾದಾಗ, ಹೊರಗೆ ಕಾಯುತ್ತಿದ್ದ ಜನರು ಆಶ್ರಯಕ್ಕಾಗಿ ಮತ್ತು ದೇವರ ದರ್ಶನಕ್ಕಾಗಿ ಒಮ್ಮೆಗೇ ನುಗ್ಗಿದ್ದಾರೆ.
ಈ ನೂಕುನುಗ್ಗಲಿನಲ್ಲಿ ಪೆಂಡಾಲ್ನ ನಿರ್ಗಮನ ದ್ವಾರದ ಒಂದು ಭಾಗ ಕುಸಿದು ಬಿದ್ದಿದ್ದರಿಂದ ಭಕ್ತರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿ ಕಾಲ್ತುಳಿತ ಸಂಭವಿಸಿದೆ.
ಮೃತಪಟ್ಟ 17 ಜನರಲ್ಲಿ 13 ಮಹಿಳೆಯರು ಮತ್ತು ಒಂದು ಮಗು ಸೇರಿದ್ದಾರೆ. ಇನ್ನು 35ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಹಲವರು ಪ್ರಜ್ಞೆ ತಪ್ಪಿ ಕಳೆದುಕೊಂಡಿದ್ದಾರೆ.
ಗಾಯಗೊಂಡವರನ್ನು ತಕ್ಷಣ ಬೈಕ್, ಆಟೋ ಮತ್ತು ಆಂಬ್ಯುಲೆನ್ಸ್ಗಳ ಮೂಲಕ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನಾ ಸ್ಥಳಕ್ಕೆ ವಿಪತ್ತು ನಿರ್ವಹಣಾ ತಂಡ ಅಗ್ನಿಶಾಮಕ ದಳ ಮತ್ತು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪೆಂಡಾಲ್ ಅನ್ನು ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಆರೋಗ್ಯ ಸಚಿವ ಶರದ್ವತ್ ಮುಖರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿಗತಿಯನ್ನು ಪರಿಶೀಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
