ಮೈಸೂರು: ಶಾಲಾ, ಕಾಲೇಜು ದಾಖಲಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ದಾಖಲಾತಿಗೆ ತೊಂದರೆಯಾಗದಂತೆ ಜಾತಿ ಪ್ರಮಾಣ ಪತ್ರ ವಿತರಿಸಿ ಎಂದು ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್ ಅವರು ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ-ಪಂಗಡ ಸೇರಿದಂತೆ ಇತರೆ ವರ್ಗದವರು ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಆದ್ಯತೆ ನೀಡಿ ವಿತರಣೆ ಮಾಡುವಂತೆ ಅವರು ಆದೇಶಿಸಿದರು.
ಡಾ: ಬಾಬು ಜಗಜೀವನ್ ರಾಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೊಡಬೇಕಿರುವ ದಾಖಲಾತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಜಾಗೃತ ಮತ್ತು ಉಸ್ತುವರಿ ಸಮಿತಿ ಸದಸ್ಯರಾದ ಚಿಕ್ಕ ಜವರಾಯ್ಯ ಅವರು ಮಾತನಾಡಿ ಪೊಲೀಸ್ ಇಲಾಖೆ ವತಿಯಿಂದ ನಡೆಸಲಾಗುವ ಕುಂದುಕೊರತೆ ಸಭೆಗಳಿಗೆ ಆಯಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪಂಗಡದ ಮುಂಖಡರನ್ನು ಆಹ್ವಾನಿಸಿದರೆ, ಬಹಳಷ್ಟು ತೊಂದರೆಗಳ ಬಗ್ಗೆ ಚರ್ಚಿಸಬಹುದು ಎಂದು ಹೇಳಿದರು.
ತಾಲ್ಲೂಕು ಮಟ್ಟದಲ್ಲಿ ನಿಗದಿತವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಾಗೃತ ಮತ್ತು ಉಸ್ತುವಾರಿ ಸಮಿತಿ ನಡೆಯುತ್ತಿಲ್ಲ. ಸಮಿತಿ ರಚಿಸಿಕೊಂಡು ನಿಗದಿತವಾಗಿ ಸಭೆ ನಡೆಸುವಂತೆ ಮನವಿ ಮಾಡಿದರು.
ಮೈಸೂರು ನಗರದ ಕೆಲವು ಬಡಾವಣೆ, ವೃತ್ತಗಳಿಗೆ, ದ್ವಾರಗಳಿಗೆ ಡಾ: ಬಿ.ಅರ್ ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿದಾಗ ವೃತ್ತ ಹಾಗೂ ದ್ವಾರಗಳಿಗೆ ಡಾ: ಬಿ.ಆರ್. ಅಂಬೇಡ್ಕರ್ ಹೆಸರು ನಾಮಕರಣ ಮಾಡಲು ಸಂಬಂಧಿಸಿದ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಐಶ್ವರ್ಯ ಅವರು ತಿಳಿಸಿದರು.
ಮೈಸೂರು ತಾಲ್ಲೂಕು ಆಲನಹಳ್ಳಿ ಗ್ರಾಮದ ಸರ್ವೆನಂ. 28 ರಲ್ಲಿ ಜಮೀನು ಒತ್ತುವರಿಯಾಗಿರುವ ಬಗ್ಗೆ ಚರ್ಚಿಸಿದಾಗ ಅಪರ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿಯಾಗಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ಮೈಸೂರು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಎಸ್.ಟಿ ರವಿಕುಮಾರ್, ಪಾರ್ವತಮ್ಮ, ವೇಣುಗೋಪಾಲ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸವಿತಾ, ಮೈಸೂರು ಮಹಾನಗರಪಾಲಿಕೆ ಉಪ ಆಯುಕ್ತೆ ವೀಣಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
