ಬೆಂಗಳೂರು: ರಾಜ್ಯದಲ್ಲಿ ಉದ್ಭವಿಸಿರುವ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಹತ್ವದ ಸಭೆ ನಡೆಸಿದರು.
ಬೆಂಗಳೂರು ವಸಂತನಗರದಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಐಒಸಿ, ಎಚ್ಪಿಸಿ ಎಲ್, ಬಿಪಿಸಿಎಲ್ ಹಾಗೂ ಗೇಲ್ ಕಂಪನಿಗಳ ಅಧಿಕಾರಿಗಳು, ಹಾಗೂ ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಅದ್ಯಕ್ಷರು,ಪ್ರತಿನಿಧಿಗಳು ಸೇರಿದಂತೆ ವಿವಿಧ ವಲಯದ ಪ್ರಮುಖರು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ತೊಂದರೆ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಶೇ.20 ರಷ್ಟು ಪೂರೈಕೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ, ಹೋಟೆಲ್ ಹಾಗೂ ಸಂಬಂಧಿತ ಉದ್ಯಮಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕನಿಷ್ಠ ಶೇ 50 ರಷ್ಟು ಪೂರೈಕೆ ಅಗತ್ಯವಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರತಿದಿನ ಸುಮಾರು 7000 ಕಮರ್ಷಿಯಲ್ ಸಿಲಿಂಡರ್ಗಳನ್ನು ಹಂಚಿಕೆ ಮಾಡಲಾಗುತ್ತಿತ್ತು, ಪ್ರಸ್ತುತ ಆಟೋ ಗ್ಯಾಸ್ ಸೇರಿದಂತೆ ವಿವಿಧ ವಲಯಗಳನ್ನು ಸೇರಿಸಿ ಒಟ್ಟು 15,000 ರಿಂದ16,000 ಸಿಲಿಂಡರ್ ವಿತರಣೆ ಮಾಡಲು ನಿರ್ದರಿಸಲಾಗಿದೆ ಇದರಲ್ಲಿ ಹೋಟೆಲ್, ರೆಸ್ಟೋರೆಂಟ್, ಡಾಬಾ, ಕ್ಯಾಂಟೀನ್, ಫುಡ್ ಪ್ರೊಸೆಸಿಂಗ್ ಘಟಕಗಳು ಸೇರಿದಂತೆ ವಿವಿಧ ಸೇವಾ ವಲಯಗಳಿಗೆ ಪ್ರತಿದಿನ 10 ಸಾವಿರ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ಇದರೊಂದಿಗೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಫಾರ್ಮಾಸಿಟಿಕಲ್, ಮೀನುಗಾರಿಕೆ, ಸಿರಿಕಲ್ಚರ್ ಹಾಗೂ ಇತರೆ ಅಗತ್ಯ ವಲಯಗಳಿಗೆ ಪ್ರತ್ಯೇಕ ಆದ್ಯತೆ ನೀಡಿ ಸುಮಾರು 500 ಸಿಲಿಂಡರ್ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಮಾರ್ಕೆಟ್ ನಿಯಂತ್ರಣ ಹಾಗೂ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಕಮರ್ಷಿಯಲ್ ಸಿಲಿಂಡರ್ ಬಳಕೆದಾರರು GAIL ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಒಂದು ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ, ಇದರಿಂದ ಮುಂದಿನ ದಿನಗಳಲ್ಲಿ ಪೈಪ್ಲೈನ್ ಆಧಾರಿತ ಗ್ಯಾಸ್ ಪೂರೈಕೆಯನ್ನು ವಿಸ್ತರಿಸಲು ಸಹಾಯಕವಾಗಲಿದೆ ಎಂದು ಹೇಳಿದರು.
ದಾಖಲೆ ಆಧಾರಿತ ವಿತರಣೆ ವ್ಯವಸ್ಥೆ ರೂಪಿಸುವ ಮೂಲಕ ದುರ್ಬಳಕೆ ತಡೆಯುವುದು ಮತ್ತು ಯಥಾರ್ಥ ಬಳಕೆದಾರರಿಗೆ ಗ್ಯಾಸ್ ತಲುಪಿಸುವುದು ನಮ್ಮ ಉದ್ದೇಶ ಎಂದು ಮುನಿಯಪ್ಪ ತಿಳಿಸಿದರು.
ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಿ ಪೂರೈಕೆಯ ಸ್ಥಿತಿ ಹಾಗೂ ಸುಧಾರಣೆ ಕುರಿತು ಸಮೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್,ಅರುಂದಿ ಗೊಯಲ್,ದಿವ್ಯ, ಮುರಳಿ ಚಾರ್,ಸುಬ್ರತ್ ಚಟರ್ಜಿ,ರಾಜೇಶ್ ಸಿಂಗ್,ಸಂಜಯ್ ಕುಮಾರ್ ಸಿಂಗ್,ಪ್ರಣಯ ದೇವನಾಗನ್,ರವಿಕುಮಾರ್ ತಂಡಲ್,ಪ್ರಸೂನ್ ಉಪಸ್ಥಿತರಿದ್ದರು.
ಯ
