ಮೈಸೂರು: ಮುಡಾ ನಿವೇಶನಗಳ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರು ಕಳಂಕಮುಕ್ತರಾಗಿದ್ದು, ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಹೇಳಿದ್ದಾರೆ.
ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸಿ,ಸುಬ್ರಹ್ಮಣ್ಯ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ಮಸಿ ಬಳಿಯಬೇಕು ಅಂತ ಕಾಣದ ಕೈಗಳು ಹಾಗೂ ವಿಪಕ್ಷಗಳು ಇಲ್ಲಸಲ್ಲದ ಷಡ್ಯಂತ್ರ ನಡೆಸಿದವು. ಮುಖ್ಯಮಂತ್ರಿಗಳನ್ನ ಜೈಲಿಗೆ ಕಳಿಸಬೇಕೆಂದು ವ್ಯವಸ್ಥಿತ ಪಿತೂರಿ ನಡೆಸಿದರು, ಇ ಡಿ ಯನ್ನೂ ಛೂ ಬಿಟ್ಟರು. ಸುಳ್ಳೇ ಸತ್ಯವೆಂದು ಪಾದಯಾತ್ರೆ ಮಾಡಿ ಜನರಿಗೆ ಮಕ್ಮಲ್ ಟೋಪಿ ಹಾಕಹೊರಟಿದ್ದರು, ಈಗ ನ್ಯಾಯಾಲಯದ ಆದೇಶ ವಿಪಕ್ಷಗಳಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಪತ್ನಿ ಯಾವುದೇ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡವರಲ್ಲ. ಪ್ರಚಾರಕ್ಕೂ ಬಂದವರಲ್ಲ. ಆದರೂ ಕಾನೂನಿನ ಅನ್ವಯ ಪಡೆದಿದ್ದ 14 ಸೈಟುಗಳನ್ನು ಹಿಂದಿರುಗಿಸಿ ಘನತೆ ಮೆರೆದಿದ್ದರು. ಆದರೆ ವಿಪಕ್ಷಗಳ ಕುತಂತ್ರ ಅವರನ್ನು ಜೈಲಿಗೆ ಕಳಿಸುವುದಾಗಿತ್ತು. ಜೊತೆಗೆ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯುವ ಹುನ್ನಾರವೂ ನಡೆದಿತ್ತು. ಈಗ ನ್ಯಾಯ ದೇವತೆಯೇ ಬಿಜೆಪಿಗೆ ತಪರಾಕಿ ಹಾಕಿದೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.
ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ಬಿಜೆಪಿಯವರು ಷಡ್ಯಂತ್ರ ಮಾಡಿದರು ರಾಜಕೀಯವಾಗಿ ಸಿದ್ದರಾಮಯ್ಯರನ್ನ ಎದುರಿಸಲಾಗದೇ ಇ ಡಿ ಯನ್ನ ದುರ್ಬಳಕೆ ಮಾಡಿಕೊಂಡು, ಪಾರ್ವತಿ ಅವರ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ಮಾನಸಿಕವಾಗಿ ಕಿರುಕುಳ ನೀಡಿದ್ದರು. ಈ ಮೊದಲು ಸುಪ್ರೀಂ ಆದೇಶ ಈಗ ಜನಪ್ರತಿನಿಧಿಗಳ ನಿರ್ಧಾರದಿಂದ ವಿರೋಧಿಗಳಿಗೆ ಮುಖಭಂಗವಾಗಿದೆ ಎಂದು ಅವರು ಕುಟುಕಿದ್ದಾರೆ.
ಕಳೆದ 10-12 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇಡಿ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದವರೆಲ್ಲರಲ್ಲೂ ಈ ತೀರ್ಪು ಸಮಾಧಾನ ಉಂಟುಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ.
ಇನ್ನಾದರೂ ಬಿಜೆಪಿಯವರು ವೈಯಕ್ತಿಕ, ದ್ವೇಷ ರಾಜಕಾರಣ ಬಿಟ್ಟು, ಆಡಳಿತ ವಿಚಾರದಲ್ಲಿ ಚರ್ಚೆ ಮಾಡಲಿ ಎಂದು ಸುಬ್ರಮಣ್ಯ ಸಲಹೆ ನೀಡಿದ್ದಾರೆ.
