ಮೈಸೂರು: ಮೈಸೂರು ವಿವಿ ಪ್ರಸಾರಾಂಗ ಆಯೋಜಿಸಿರುವ ವಿಶೇಷ ರಿಯಾಯಿತಿ ಪುಸ್ತಕ ಮಾರಾಟಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.
ಎರಡೂವರೆ ತಿಂಗಳಲ್ಲಿ ೨೨ ಲಕ್ಷ ರೂ. ಮೌಲ್ಯದ ಪುಸ್ತಕಗಳ ವಹಿವಾಟು ನಡೆದು ದಾಖಲೆ ನಿರ್ಮಿಸಿದ್ದು ಬೇಡಿಕೆ ಮೇರೆಗೆ ರಿಯಾಯಿತಿ ಮಾರಾಟ ಮಾರ್ಚ್ ವರೆಗೆ ವಿಸ್ತರಣೆ ಮಾಡಲಾಗಿದೆ.
ಪ್ರಸಾರಾಂಗದ ನಿರ್ದೇಶಕ ಡಾ.ಎಂ. ನಂಜಯ್ಯ ಹೊಂಗನೂರು ಅವರು ಗೋದಾಮಿನಲ್ಲಿರುವ ಅಮೂಲ್ಯ ಪ್ರಕಟಣೆಗಳು ಓದುಗರಿಗೆ ಲಭ್ಯವಾಗ ಬೇಕೆಂಬ ಆಶಯದಲ್ಲಿ ಮೈಸೂರು ವಿವಿ ಅನುಮತಿ ಯೊಂದಿಗೆ ವಿಶೇಷ ರಿಯಾಯಿತಿಯಡಿ ಪುಸ್ತಕಗಳ ಮಾರಾಟ ಆರಂಭಿಸಿದರು.
ಶೇ. ೫೦ರಿಂದ ಶೇ.೭೫ ರಿಯಾಯಿತಿಯೊಂದಿಗೆ ೨೦೨೫ರ ಡಿಸೆಂಬರ್ ೧೦ರಿಂದ ಮಾರಾಟ ಆರಂಭ ಗೊಂಡು ಇದೇ ಫೆ. ೨೪ ಕ್ಕೆ ಒಟ್ಟು ೨೨,೬೫,೪೫೮ ರೂ.ಬೆಲೆಯ ಪುಸ್ತಕಗಳು ಮಾರಾಟವಾಗಿದೆ.
ಒಟ್ಟು ಪುಸ್ತಕಗಳ ಮೌಲ್ಯ ೪೫ ಲಕ್ಷ ರೂ.ಗಳದ್ದಾಗಿವೆ. ಮೌಲಿಕವಾದ ಅಪರೂಪದ ಕೃತಿಗಳು ಓದುಗರನ್ನು ತಲುಪಿವೆ.ಪ್ರಸಾರಾಂಗ, ರಾಮಸ್ವಾಮಿ ವೃತ್ತದ ಬಳಿಯ ಮಳಿಗೆ ಸೇರಿ ಪ್ರತಿನಿತ್ಯ ಸರಾಸರಿ ೩೦ ಸಾವಿರ ರೂ. ವ್ಯಾಪಾರ ವಾಗಿದೆ.
ಡಿಸೆಂಬರ್ ೩೧ರಂದು ೧,೦೬,೦೯೪ ರೂ.ಗಳ ಪುಸ್ತಕಗಳನ್ನು ಖರೀದಿಸಿದ್ದಾರೆ. ಜ.೭ರಂದು ೧ ಲಕ್ಷ ೨೯ ಸಾವಿರ ರೂ., ಜ.೨೮ರಂದು ೧ ಲಕ್ಷ ದ ೧೮ ಸಾವಿರ, ಫೆ. ೨ರಂದು ೧ ಲಕ್ಷ ೨೧ ಸಾವಿರ ರೂ.ಗಳ ದಾಖಲೆಯ ವ್ಯಾಪಾರವಾಗಿದೆ.
ವಿಶ್ವಕೋಶಕ್ಕೆ ಶೇ. ೫೦ ರಿಯಾಯಿತಿ ನೀಡಿದ್ದರಿಂದ ೩೬೦೦ ರೂ. ಮೌಲ್ಯದ ೯೦ ಸೆಟ್ ಮಾರಾಟವಾಗಿದೆ. ಇಂಗ್ಲಿಷ್- ಕನ್ನಡ ನಿಘಂಟು, ಕನ್ನಡ ಗ್ರಂಥಸೂಚಿ, ಗಾಂಧಿ ಭವನದ ಪ್ರಕಟಣೆಗಳು, ಪ್ರಾಚ್ಯವಿದ್ಯಾ ಸಂಶೋಧನಾಲಯಗಳ ಪ್ರಕಟಣೆಗಳು, ಬಸವಣ್ಣ ಚಿಂತನಮಾಲೆ, ಭಾರತೀಯ ಕಾವ್ಯ ಮೀಮಾಂಸೆ, ಪಠ್ಯ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.
ಪ್ರೌಢ ಇತಿಹಾಸ, ಭಾರತ ಕಾವ್ಯ ಮೀಮಾಂಸೆ, ಸಾಹಿತ್ಯ ಸಂಹಿತೆ, ಸುಶ್ರುತ ಸಂಹಿತೆ, ಶ್ರೀರಾಮಾಯಣ ದರ್ಶನಂ, ರಸಋಷಿ ಸಂಪುಟಗಳು, ಕನ್ನಡ ಕೈಪಿಡಿ, ಕಚೇರಿ ಕೈಪಿಡಿ, ಸಾಹಿತ್ಯ ಭಾರತಿ ಕೃತಿಗಳಿಗೆ ಹೆಚ್ಚಿನ ಬೇಡಿಕೆ ಇದೆ,ಕೃತಿಗಳು ಲಭ್ಯವಿಲ್ಲ ಎಂದು ಡಾ.ನಂಜಯ್ಯ ಹೇಳುತ್ತಾರೆ.
ರಿಯಾಯಿತಿ ಪುಸ್ತಕ ಮಾರಾಟ ಆರಂಭವಾದ ಮಳಿಗೆ ಪ್ರಸಾರಾಂಗಕ್ಕೆ ೫ ಸಾವಿರ ಜನರು ಭೇಟಿ ನೀಡಿದ್ದಾರೆ. ಹಿರಿಯ ನಾಗರಿಕರು ಹೆಚ್ಚಿನ ಪುಸ್ತಕ ಖರೀದಿ ಮಾಡಿದ್ದಾರೆ.
ಪುಸ್ತಕೋತ್ಸವ ಆಯೋಜನೆ ಮತ್ತು ಮಾಧ್ಯಮಗಳಲ್ಲಿ ಉತ್ತಮ ಪ್ರಚಾರ ದೊರೆತಿದ್ದರಿಂದ ವ್ಯಾಪಾರ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿರುವ ೮೪ ಕಾಲೇಜುಗಳಿಗೆ ಪತ್ರ ಬರೆಯಲಾಗಿತ್ತು. ಬಹುತೇಕ ಕಾಲೇಜುಗಳು ಪಠ್ಯ ಪುಸ್ತಕ ಖರೀದಿ ಮಾಡಿವೆ.
ಸಪ್ನ, ನವ ಕರ್ನಾಟಕ, ಭೂಮಿಕಾ, ಚೇತನ, ಆಕ್ಸ್ಪರ್ಡ್ ಪ್ರಕಾಶನಗಳು ಲಕ್ಷಾಂತರ ರೂ.ಗಳ ಪುಸ್ತಕ ಖರೀದಿಸಿವೆ.
ಪ್ರಸಾರಾಂಗ ಈವರೆಗೆ ೨೪೦೦ ಶೀರ್ಷಿಕೆಯ ಕೃತಿಗಳನ್ನು ಪ್ರಕಟಿಸಿದೆ. ಸದ್ಯಕ್ಕೆ ೭೦೦ರಿಂದ ೬೦೦ ಶೀರ್ಷಿಕೆಯ ಕೃತಿಗಳು ಮಾತ್ರ ಲಭ್ಯವಿವೆ.
ತಜ್ಞರು, ವಿದ್ವಾಂಸರ ಕೊರತೆಯಿಂದ ಕೃತಿಗಳನ್ನು ಪರಿಷ್ಕರಣೆ ಮಾಡಿ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಡಾ.ನಂಜಯ್ಯ ಹೊಂಗನೂರು.
ರಿಯಾಯಿತಿ ಮಾರಾಟ ಮಾರ್ಚ್ವರೆಗೆ ವಿಸ್ತರಣೆ:
ಪ್ರಸಾರಾಂಗ ರಿಯಾಯಿತಿ ಪುಸ್ತಕ ಮಾರಾಟದ ಅವಧಿಯನ್ನು ಮಾರ್ಚ್ ೩೧ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಡಾ. ಎಂ.ನಂಜಯ್ಯ ಹೊಂಗನೂರು ತಿಳಿಸಿದ್ದಾರೆ.
ಜನ ಸಾಮಾನ್ಯರ ಬಳಿಗೆ ಪ್ರಸಾರಾಂಗ ಹೋಗಬೇಕು ಮತ್ತು ಜನ ಸಾಮಾನ್ಯರನ್ನು ಆಕರ್ಷಿಸಬೇಕು. ವರ್ತಮಾನದ ಬದುಕಿನ ಬಗ್ಗೆ ತಿಳುವಳಿಕೆ ಕೊಡಬೇಕೆಂಬುದು ಮೂಲತತ್ವ. ಈ ತತ್ವದಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
