ಮೈಸೂರು: ಮುಡಾದ 50:50 ಅನುಪಾತದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸೈಟ್ ಪಡೆದವರಿಗೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶಾಕ್ ನೀಡಿದ್ದಾರೆ.
ನಗರದ ಅರಮನೆ ಆವರಣದಲ್ಲಿ ಗಜಪಡೆಗೆ ಸ್ವಾಗತ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019 ರಿಂದ 2023ರವರೆಗೆ ಹಂಚಿಕೆಯಾಗಿರುವ ಎಲ್ಲಾ 50:50 ಸೈಟ್ಗಳನ್ನು ರದ್ದು ಪಡಿಸಲಾಗಿದೆ. ಒಟ್ಟು 1000ಕ್ಕೂ ಹೆಚ್ಚು ನಿವೇಶನಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
50:50 ಸೈಟ್ಗಳಲ್ಲಿ ಈಗಾಗಲೇ ಮನೆ ಕಟ್ಟಿರುವವರ ಪಟ್ಟಿಯನ್ನು ತರಿಸುತ್ತಿದ್ದೇನೆ. ಸದ್ಯಕ್ಕೆ ಎಲ್ಲಾ ನಿವೇಶನಗಳು ರದ್ದಾಗಿವೆ. ಕಾನೂನಾತ್ಮಕ ಹೋರಾಟದಲ್ಲಿರುವ ಸೈಟ್ಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಈ ಸಂಬಂಧ ಸಂಪೂರ್ಣ ಆದೇಶವನ್ನು ನಾವು ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ. ಆದೇಶ ಜಾರಿ ಮಾಡುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ,2018ಕ್ಕಿಂತ ಹಿಂದೆ ಸೈಟ್ ಪಡೆದವರ ಬಗ್ಗೆಯೂ ಪರಿಶೀಲನೆ ನಡೆದಿದೆ. ಅಲ್ಲಿಯೂ ಅಕ್ರಮಗಳು ನಡೆದಿದ್ದರೆ ಅವುಗಳನ್ನೂ ರದ್ದು ಮಾಡುತ್ತೇವೆ ಎಂದು ಡಾ.ಯತೀಂದ್ರ ತಿಳಿಸಿದರು.
ರಸ್ತೆಗೆ ತಮ್ಮ ಜಮೀನು ಕೊಟ್ಟು ಪರಿಹಾರ ಪಡೆದವರೂ ಕೂಡ ನಿವೇಶನ ಪಡೆದಿದ್ದಾರೆ. ಸಾಕಷ್ಟು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ರದ್ದು ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಚಿವ ನಾಗೇಂದ್ರ ತಪ್ಪು ಮಾಡಿಲ್ಲ:
ಸಚಿವ ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಇದೇ ವೇಳೆ ಡಾ. ಯತೀಂದ್ರ ಹೇಳಿದರು.
ಒಂದು ವೇಳೆ ತಪ್ಪು ಮಾಡಿದ್ದರೆ ಬಿಜೆಪಿಯವರು ಸದನದಲ್ಲಿ ಚರ್ಚೆಗೆ ಬರಬೇಕಿತ್ತು. ಆದರೆ ಬಿಜೆಪಿಯವರು ಗದ್ದಲ ಮಾಡಿ ಅಧಿವೇಶನವನ್ನೇ ಹಾಳು ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಗೇಂದ್ರ ಅವರ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಯತೀಂದ್ರ ಹೇಳಿದರು.
