ಕೊಳ್ಳೇಗಾಲ: 1 ಕೋಟಿ ವೆಚ್ಚದಲ್ಲಿ ನೂತನ ವ್ಯವಸ್ಥೆ,ಹೆಚ್ಚು ಸಾಮರ್ಥ್ಯದ ಮೋಟಾರ್ ಶುದ್ಧೀಕರಣ ಯಂತ್ರಕ್ಕೆ ಶಾಸಕ ಎಂ. ಆರ್ ಮಂಜುನಾಥ್ ಅವರು ಚಾಲನೆ ನೀಡಿದರು.
ಹನೂರು ಪಟ್ಟಣಕ್ಕೆ ಸರಬರಾಜಾಗುತ್ತಿದ್ದ ಕಾವೇರಿ ಕುಡಿಯುವ ನೀರಿನ ಪೂರೈಕೆಯಲ್ಲಿ ಆಗಾಗ್ಗೆ ಉಂಟಾಗುತ್ತಿದ್ದ ವ್ಯತ್ಯಯಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 1 ಕೋಟಿ ವೆಚ್ಚದಲ್ಲಿ ಹೆಚ್ಚು ಸಾಮರ್ಥ್ಯದ ನೂತನ ಮೋಟಾರ್ ಹಾಗೂ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಈ ವೇಳೆ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಹರಳೆ ಹಾಗೂ ಸಿದ್ದಯ್ಯನಪುರ ಪಂಪ್ಹೌಸ್ಗಳಲ್ಲಿ ನೂತನವಾಗಿ ಅಳವಡಿಸಿರುವ ಮೋಟಾರ್ ಮತ್ತು ಶುದ್ಧೀಕರಣ ಯಂತ್ರಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ತಾಂತ್ರಿಕ ದೋಷ, ಮೋಟಾರ್ ದುರಸ್ತಿ ಸೇರಿದಂತೆ ವಿವಿಧ ಕಾರಣಗಳಿಂದ ಪಟ್ಟಣದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಇದನ್ನು ಮನಗಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
1ಕೋಟಿ ಅನುದಾನದಲ್ಲಿ 67 ಲಕ್ಷ ವೆಚ್ಚದಲ್ಲಿ ಹೆಚ್ಚು ಸಾಮರ್ಥ್ಯದ ನೂತನ ಮೋಟಾರ್ ಹಾಗೂ 33 ಲಕ್ಷ ವೆಚ್ಚದಲ್ಲಿ ನೂತನ ಶುದ್ಧೀಕರಣ ಯಂತ್ರ ಅಳವಡಿಸಲಾಗಿದೆ. ಇದರಿ ಮುಂದಿನ 10ರಿಂದ 15 ವರ್ಷಗಳವರೆಗೆ ನೀರು ಪೂರೈಕೆಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ತೊಂದರೆ ಎದುರಾಗುವುದಿಲ್ಲ ಎಂದು ಹೇಳಿದರು.
ನೂತನ ವ್ಯವಸ್ಥೆಯನ್ನು ವಾಟರ್ ಬೋರ್ಡ್ಗೆ ವಹಿಸಲಾಗಿದ್ದು, ಮುಂದಿನ ಐದು ವರ್ಷಗಳ ಕಾಲ ಅದರ ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ವಾಟರ್ ಬೋರ್ಡ್ ನಿರ್ವಹಿಸಲಿದೆ. ಹೀಗಾಗಿ ಮೋಟಾರ್ ದುರಸ್ತಿ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಮನೆಗೂ ಕಾವೇರಿ ನೀರು: ಹನೂರು ಪಟ್ಟಣದ 13 ವಾರ್ಡ್ಗಳ ಪ್ರತಿ ಮನೆಗೂ ಕಾವೇರಿ ಕುಡಿಯುವ ನೀರು ಪೂರೈಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ 24 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಪಟ್ಟಣದ ಮನೆ-ಮನೆಗೂ ಸಮರ್ಪಕವಾಗಿ ಕಾವೇರಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಂಜುನಾಥ್ ಭರವಸೆ ನೀಡಿದರು.
ಯುಜಿಡಿ ಅಭಿವೃದ್ಧಿಗೂ ಆದ್ಯತೆ : ಪಟ್ಟಣದಲ್ಲಿ ಕುಡಿಯುವ ನೀರಿನ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ಅಭಿವೃದ್ಧಿಗೂ ಹೆಚ್ಚಿನ ಅನುದಾನದ ಅಗತ್ಯವಿದೆ. ಈ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆ ಅನುಮೋದನೆಯ ಹಂತದಲ್ಲಿದ್ದು, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಹನೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ರೂಪಿಸುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ವೆಂಕಟೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ, ಕಿರಿಯ ಅಭಿಯಂತರ ನಾಗರಾಜು, ಮುಖಂಡರಾದ ರಾಜುನಾಯ್ಡು, ಅಗಸ್ಟಿಯನ್, ವಾಟರ್ಮೆನ್ಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
