ಬೆಂಗಳೂರು: ಮೂರು ತಿಂಗಳು ಕಾಯಿಸಿ, ಬಡ ಮಕ್ಕಳ ಕಾಲುಗಳಿಗೆ ತೊಡಿಸಿದ್ದು ಕಳಪೆ ಶೂಗಳನ್ನು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಯಾವ ಅಧೋಗತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ನೀಡಬೇಕಾದ ಉಚಿತ ಶೂ ಮತ್ತು ಸಾಕ್ಸ್ ವಿತರಣೆಯಲ್ಲಿಯೂ ನಿಮ್ಮ ಸರ್ಕಾರದ ಕಮಿಷನ್ ದಂಧೆ ಮತ್ತು ಭ್ರಷ್ಟಾಚಾರ ಎದ್ದು ಕಾಣುತ್ತಿದೆ ಸಿಎಂ ಡಿ.ಕೆ.ಶಿವಕುಮಾರ್ ಅವರೇ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಮೂರು ತಿಂಗಳು ಕಾದು ಕುಳಿತ ಸಣ್ಣ ಮಕ್ಕಳಿಗೆ ನೀಡಿದ ಶೂಗಳು ಮೊದಲ ಬಾರಿಗೆ ಹಾಕಿದ ತಕ್ಷಣವೇ ಹರಿದು ಹೋಗುತ್ತಿವೆ. ಹೊಲಿಗೆಗಳು ಬಿಟ್ಟುಕೊಳ್ಳುತ್ತಿವೆ, ತಳಭಾಗ ಕಿತ್ತು ಬರುತ್ತಿದೆ. ಕೆಲವು ಶಾಲೆಗಳಿಗೆ ಒಂದೇ ಸೈಜ್ ಶೂ ಸರಬರಾಜು ಮಾಡಿ ಗೊಂದಲ ಸೃಷ್ಟಿಸಲಾಗಿದೆ.
ಶೂ, ಸಾಕ್ಸ್ ಪೂರೈಕೆಯಲ್ಲಿ ನಡೆದಿರುವ ಈ ಬೃಹತ್ ಅಕ್ರಮ ಹಾಗೂ ಭ್ರಷ್ಟಾಚಾರದ ಕುರಿತು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಬಡ ಮಕ್ಕಳ ಹಕ್ಕನ್ನು ಕಸಿದು, ಅವರ ಭವಿಷ್ಯದ ಜೊತೆ ಚೆಲ್ಲಾಟಟವಾಡುತ್ತಿರುವ ಬೇಜವಾಬ್ದಾರಿ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದ್ದಾರೆ.
