
ಮಂಡ್ಯ: ಶ್ರೀ ಆದಿಚುಂಚನಗಿರಿ ಮಠದಂತಹ ಆಧ್ಯಾತ್ಮಿಕ ಕೇಂದ್ರ ಕರ್ನಾಟಕ ರಾಜ್ಯದಲ್ಲಿದೆ. ಇವೆಲ್ಲ ಸಮಾಜಕ್ಕೆ ದಾರಿ ತೋರಿಸುತ್ತಿದೆ. ಜಗತ್ತಿನಲ್ಲಿ ಎಲ್ಲೂ ಈ ತರಹದ ದೊಡ್ಡ ಪರಂಪರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದರು.
ಈ ಆದಿಚುಂಚನಗಿರಿ ಮಠದಲ್ಲಿ ನಿರಂತರತೆ ರೂಪದಲ್ಲಿ ಪರಂಪರೆ ಮುಂದುವರಿದಿದೆ. ಬಾಲಗಂಗಾಧರನಾಥ ಸ್ವಾಮೀಜಿಯವರಂತಹ ಮಹಾತ್ಮರು ಈ ಮಣ್ಣನಲ್ಲಿ ಹುಟ್ಟಿದ್ದಾರೆ, ನಿರ್ಮಲಾನಂದನಾಥ ಸ್ವಾಮೀಜಿ ಅವರು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಸ್ವಾಮೀಜಿ ಶರೀರ ನಮ್ಮದೊಂದಿಗಿಲ್ಲ,ಆದರೆ ಅವರ ಆಶೀರ್ವಾದ ನಮ್ಮೊಂದಿಗೆ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಸಂಸ್ಥೆಗಳನ್ನು ಶ್ರೀಮಠದವರು ಸ್ಥಾಪಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದೂರದೃಷ್ಟಿಯ ಹೆಜ್ಜೆ ಇಟ್ಟಿದ್ದಾರೆ. ಇಂದು ನಮ್ಮ ಸರ್ಕಾರ ಇದೇ ರೀತಿಯ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಿ ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದು ನನ್ನ ಸೌಭಾಗ್ಯ ಎಂದು ಪ್ರಧಾನಿ ಹೇಳಿದರು.
ಸ್ವಾಮೀಜಿಗಳು ಕೇವಲ ಮನುಷ್ಯರಷ್ಟೇ ಅಲ್ಲಾ ಜೀವ ಸಂಕುಲದ ರಕ್ಷಣೆ ಮಾಡುತ್ತಿದ್ದಾರೆ. ನವಿಲಿನ ರಕ್ಷಣೆ ಮಾಡುತ್ತಿದ್ದಾರೆ. ಅದಕ್ಕಾಗಿ ನವಿಲಿನ ಕಲಾಕೃತಿಯ ಉಡುಗೊರೆ ನೀಡಿದ್ದಾರೆ. ಸುಬ್ರಹ್ಮಣ್ಯನ ವಾಹನ ನವಿಲು. ನವಿಲು ನಮ್ಮಲ್ಲೂ ಇದೆ. ಅವುಗಳು ನನ್ನ ಸ್ನೇಹಿತರು ಎಂದು ತಿಳಿಸಿದರು.
ಭೈರವೈಕ್ಯ ಮಂದಿರ ಕೇವಲ ಕಟ್ಟಡ ಮಾತ್ರವಲ್ಲ, ಭಾವನೆಗಳ ಸಾಕಾರ. ಸೇವೆ ಸಾಧನ, ಪ್ರೇರಣೆಯ ಕೇಂದ್ರವಾಗಿದೆ. ಇಲ್ಲಿ ಅನ್ನ ಅಕ್ಷರ, ಆರೋಗ್ಯ, ಅರಣ್ಯ, ಆಕಳು, ಅನುಗ್ರಹ, ಅನುಕಂಪದ ಸಿದ್ಧಾಂತದ ಮೇಲೆ ಕೆಲಸ ಮಾಡಲಾಗುತ್ತಿದೆ,ಇದಕ್ಕಾಗಿ ನಾವು ಸಾಮೂಹಿಕ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಮಂಡ್ಯದ ನೀರಿನ ಮಹತ್ವ ಗೊತ್ತಿದೆ. ಈ ಕ್ಷೇತ್ರ ಕಾವೇರಿಯ ಪವಿತ್ರ ಭೂಮಿ. ನಾವು ನೀರನ್ನು ಉಳಿಸುವ ಕೆಲಸ ಮಾಡಬೇಕು. ಕಾವೇರಿಗಾಗಿ ನಿಮ್ಮ ಅಮ್ಮನ ಹೆಸರಿನಲ್ಲಿ ಕೋಟಿ ಗಿಡಗಳನ್ನು ನೆಡಲು ಮೋದಿ ಕರೆ ನೀಡಿದರು.
ನಿಮ್ಮ ಗ್ರಾಮದಲ್ಲಿ ಸ್ವಚ್ಛತೆ ಮಾಡಿ. ಸ್ವದೇಶಿ ಉತ್ಪಾದನೆಯನ್ನು ಬೆಂಬಲಿಸಿ. ‘ವೋಕಲ್ ಫಾರ್ ಲೋಕಲ್’ಗಾಗಿ ಬದುಕಿ. ಸ್ವದೇಶಿ ಟೂರಿಸಂ ಅನ್ನು ಬೆಂಬಲಿಸಿ. ಕೆಮಿಕಲ್ ಮುಕ್ತ ಕೃಷಿಯನ್ನು ಮಾಡಿ ಎಂದು ಪ್ರಧಾನಿ ಸಲಹೆ ನೀಡಿದರು.
ಇಂದು ನನ್ನ ಮನಸ್ಸಿನ ಭಾವನೆ ಕೇವಲ ಶಬ್ದಗಳಲ್ಲಿ ಹೇಳುವುದಕ್ಕೆ ಆಗುವುದಿಲ್ಲ ಅಂತಹ ಅನುಭೂತಿ ಈ ಮಠದಲ್ಲಿ ನನಗೆ ಸಿಕ್ಕಿದೆ ಎಂದು ಮೋದಿ ಮನದುಂಬಿ ನುಡಿದರು.
ಸಕ್ಕರೆಗೆ ಮಂಡ್ಯ ನಗರ ಹಾಗೂ ವಡೆಗೆ ಮದ್ದೂರು ಹೆಸರುವಾಸಿಯಾಗಿದೆ ಕರ್ನಾಟಕ ರಾಜ್ಯವು ತತ್ವಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಮೃದ್ಧವಾಗಿದೆ ಆದಿಚುಂಚನಗಿರಿ ಮಠ ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಶ್ರೀಗಳು ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಮಾತ್ರ ಸೀಮಿತರಾಗಿಲ್ಲ ಅವರು ಜನರ ಸುಖ ಮತ್ತು ದುಃಖಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಜನರ ಸಂಘರ್ಷಗಳನ್ನು ಅರ್ಥ ಮಾಡಿಕೊಂಡು ಉತ್ತಮ ದಾರಿಯನ್ನು ತೋರಿಸಿದರು. ದುಃಖ ದೌರ್ಜನ್ಯ ಸಂಕಷ್ಟದಿಂದ ಜನರು ಪಾರಾಗುವ ದಾರಿ ತೋರಿಸಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ.
ಅವರ ಜೀವನ ಕೇವಲ ಸಾಧನೆಗೆ ಸೀಮಿತಗೊಂಡಿರಲಿಲ್ಲ ವೈದ್ಯಕೀಯ ಹಾಗೂ ಇಂಜಿನಿಯರ್ ಶಿಕ್ಷಣವನ್ನು ನೀಡಿದ್ದಾರೆ ಇದರ ಹೆಚ್ಚಿನ ಲಾಭ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗುತ್ತಿದೆ ಮೋದಿ ತಿಳಿಸಿದರು.
ಈ ಒಂಭತ್ತು ಸಂಕಲ್ಪಗಳ ಮೇಲೆ ನಾವು ಪ್ರಾಮಾಣಿಕತೆ ಮತ್ತು ದೃಢನಿಶ್ಚಯದೊಂದಿಗೆ ಮುಂದೆ ಸಾಗಿದರೆ, ವಿಕಸಿತ ಕರ್ನಾಟಕ ಮತ್ತು ವಿಕಸಿತ ಭಾರತದತ್ತ ವೇಗವಾಗಿ ಸಾಗಬಹುದು ಎಂದು ಹೇಳಿದರು.
ಈ ಮಂದಿರವು ಮಠದ 71ನೇ ಪೀಠಾಧಿಪತಿ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಅತ್ಯಂತ ಗೌರವ ಹೊಂದಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳಿಗೆ ಸಮರ್ಪಿತ ಸ್ಮಾರಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ಮುಖ್ಯಸ್ಥ ಹೆಚ್.ಡಿ. ದೇವೇಗೌಡ ಅವರೊಂದಿಗೆ ‘ಸೌಂದರ್ಯ ಲಹರಿ ಮತ್ತು ಶಿವ ಮಹಿಮ ಸ್ತೋತ್ರಂ’ ಪುಸ್ತಕವನ್ನು ಬಿಡುಗಡೆ ಮಾಡಿದರು.
ಮಂದಿರ ಉದ್ಘಾಟನೆಗೂ ಮೊದಲು ಪ್ರಧಾನಮಂತ್ರಿಗಳು ಜ್ವಾಲಾ ಪೀಠಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಸಿದರು. ಪೌರಾಣಿಕ ಕಥೆಗಳ ಪ್ರಕಾರ ಇಲ್ಲಿ ಶಿವನು ತಪಸ್ಸು ಮಾಡಿದನೆಂದು ನಂಬಿಕೆ ಇದೆ. ನಂತರ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋಟ್, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

