ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಳಿತು ಹಾಗೂ ಕ್ಷೇಮಕ್ಕಾಗಿ ಅವರ ತಾಯಿ ಮೀನಾ ತೂಗುದೀಪ್ ಅವರು ಶ್ರಾವಣ ಮಾಸದ ಕಡೆಯ ಶನಿವಾರ ಮೈಸೂರಿನ ಒಂಟಿಕೊಪ್ಪಲ್ನಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ದರ್ಶನ್ ಹಾಗೂ ಅವರ ಕುಟುಂಬದವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿ, ಅವರ ಆರೋಗ್ಯ, ನೆಮ್ಮದಿ ಮತ್ತು ಒಳಿತಿಗಾಗಿ ಪ್ರಾರ್ಥನೆ ಮಾಡಿದರು.
ಬಳಿಕ ದೇವಸ್ಥಾನದಲ್ಲಿರುವ ಶ್ರೀ ಕೃಷ್ಣನ ಸನ್ನಿಧಿಗೂ ಭೇಟಿ ನೀಡಿದ ಅವರು, ದರ್ಶನ್ ಸೇರಿದಂತೆ ಕುಟುಂಬದ ಸದಸ್ಯರ ಹೆಸರಿನಲ್ಲಿ ವಿಶೇಷ ಅರ್ಚನೆ ಸಲ್ಲಿಸಿ ದೇವರ ಕೃಪೆ ಕೋರಿ ಪ್ರಾರ್ಥಿಸಿದರು.
ಭಕ್ತಿಯಿಂದ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ ಮೀನಾ ತೂಗುದೀಪ್ ಅವರು ತಮ್ಮ ಪುತ್ರನ ಸಂಕಷ್ಟಗಳು ದೂರವಾಗಿ ಉತ್ತಮ ದಿನಗಳು ಮರಳಲಿ ಎಂದು ದೇವರಲ್ಲಿ ಬೇಡಿಕೊಂಡರು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಕೂಡ ದರ್ಶನ್ ಅವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
