ತ್ರಿಶೂರ್: ಸರಕು ಸಾಗಣೆ ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಕೇರಳದ ತ್ರಿಶೂರ್ ಜಿಲ್ಲೆಯ ಕೈಪಮಂಗಲಂನಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ತಡರಾತ್ರಿ ನಿಂತಿದ್ದ ಸರಕು ಸಾಗಣೆ ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದೆ.
ಪನಂಬಿಕ್ಕು ಸೆಂಟರ್ನಲ್ಲಿ ಈ ಅಪಘಾತ ಸಂಭವಿಸಿದ್ದು, ದಿಂಡಿಗಲ್ನ ಪಿಎಸ್ಎನ್ಎ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡು ನೋಂದಣಿ ಹೊಂದಿದ್ದ ಕಾರು ನಿಯಂತ್ರಣ ಕಳೆದುಕೊಂಡು ವೇಗವಾಗಿ ಲಾರಿಗೆ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದ ಸ್ಥಳದ ಸಮೀಪ ಭಾರಿ ವಾಹನವನ್ನು ನಿಲ್ಲಿಸಲಾಗಿತ್ತು.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರ ಮುಂಭಾಗ ಲಾರಿಯ ಕೆಳಗೆ ಸಂಪೂರ್ಣವಾಗಿ ಸಿಲುಕಿಕೊಂಡಿದ್ದು,ಪ್ರಾಯಾಸದಿಂದ ಹೊರತೆಗೆಯಲಾಯಿತು
ಭಾರೀ ಶಬ್ದ ಕೇಳಿದ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಪ್ರಯಾಣಿಕರನ್ನು ಹೊರತೆಗೆಯಲು ಕಾರನ್ನು ಕತ್ತರಿಸಿ ತೆರೆಯಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರೆಲ್ಲರೂ ತಮಿಳುನಾಡಿನ ಯುವಕರು. ಐವರು ಮೃತರನ್ನು ಗುರುತಿಸಲಾಗಿದೆ. ಸೇಲಂನ ವಿಶ್ವ, ದಿಂಡಿಗಲ್ನ ಸೂರ್ಯ ಮತ್ತು ಯುವ ಸಂಜಿತ್ ಹಾಗೂ ಮಧುರೈನ ಸಂತೋಷ್ ಮತ್ತು ಪ್ರಸನ್ನ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಉಳಿದ ಮೂವರು ಪ್ರಯಾಣಿಕರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
ಕೈಪಮಂಗಲಂ ಪೊಲೀಸರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ ಮೃತದೇಹಗಳನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.
ಹೆದ್ದಾರಿಯಲ್ಲಿ ಸೂಕ್ತ ಬೀದಿ ದೀಪಗಳ ಕೊರತೆ ಹಾಗೂ ಎಚ್ಚರಿಕೆ ಫಲಕಗಳಿಲ್ಲದಿರುವುದೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾತ್ರಿ ವೇಳೆ ಈ ಪ್ರದೇಶದಲ್ಲಿ ಅಪಘಾತಗಳು ನಡೆಯುತ್ತಲೇ ಇರುತ್ತವೆ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ವಾಹನ ಸಂಚಾರವನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದ್ದರೂ, ಸೂಕ್ತ ಸೂಚನಾ ಫಲಕಗಳ ಕೊರತೆಯಿಂದ ದೂರದ ಪ್ರದೇಶಗಳಿಂದ ಬರುವ ವಾಹನ ಚಾಲಕರು ಗೊಂದಲಕ್ಕೊಳಗಾಗುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
