ಮೈಸೂರು: ಶ್ರಾವಣ ಮಾಸದ ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.
ಈ ಸಂದರ್ಭದಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಗೆ ಅಭ್ಯಂಜನ ತೈಲಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ದೇವಾಲಯದ ಆವರಣದಲ್ಲಿ ಸ್ವಾಮಿಯ ಪ್ರಕಾರ ಉತ್ಸವವೂ ವಿಜೃಂಭಣೆಯಿಂದ ಜರುಗಿತು.
ದೇವಾಲಯದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.
ದೇವಾಲಯದ ವಿಶೇಷ ಹೂವಿನ ಅಲಂಕಾರ ಹಾಗೂ ಪ್ರಸಾದ ವ್ಯವಸ್ಥೆಯನ್ನು ಎಂಎಂಜಿ ಕನ್ಸ್ಟ್ರಕ್ಷನ್ ಸಂಸ್ಥೆಯ ಮಾಲೀಕರಾದ ಜಯರಾಮ್ ಹಾಗೂ ಅವರ ಕುಟುಂಬದವರು ಪ್ರಾಯೋಜಿಸಿದ್ದರು.
