ಬೆಂಗಳೂರು: ಬೆಂಗಳೂರಿನ ಮಡಿವಾಳ ಮುಖ್ಯರಸ್ತೆಯಲ್ಲಿ ಜನರ ಎದುರಲ್ಲೇ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮಂಗಮ್ಮನಪಾಳ್ಯದ ನಿವಾಸಿ, ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್ ಕೊಲೆಯಾದ ದುರ್ದೈವಿ.
ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್ನಲ್ಲಿ ತೆರಳುತ್ತಿದ್ದರು.
ಆಗ ಟ್ರಾಫಿಕ್ ಜಾಮ್ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ತಲ್ವಾರ್ಗಳಿಂದ ಅವರ ಮೇಲೆ ಮುಗಿಬಿದ್ದು, ನೂರಾರು ಜನರ ಕಣ್ಣೆದುರೇ ಸುಹೇಲ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಜನವರಿ 13 ರಂದು ಬಂಡೆಪಾಳ್ಯದಲ್ಲಿ ರೌಡಿಶೀಟರ್ ಶಬ್ಬೀರ್ ಎಂಬಾತನ ಹತ್ಯೆ ನಡೆದಿತ್ತು. ಆ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಹಾಗೂ ಇನ್ನೊಬ್ಬ ಸಹೋದರ ಆರೋಪಿಗಳಾಗಿದ್ದರು. ಈ ಪೈಕಿ ಖಲೀಂ ಇನ್ನೂ ಜೈಲಿನಲ್ಲಿದ್ದರೆ, ನಜೀರ್ ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.
ಸುಹೇಲ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದೆ ಮೆಡಿಕಲ್ ಶಾಪ್ ನಡೆಸಿಕೊಂಡು ಸಾಮಾನ್ಯ ಜೀವನ ನಡೆಸುತ್ತಿದ್ದರು. ಸಹೋದರರ ಮೇಲಿನ ಹಗೆತನಕ್ಕೆ ಶಬ್ಬೀರ್ ಸಹಚರರೇ ಸುಹೇಲ್ನನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಹೋದರ ನಜೀರ್, ಸುಹೇಲ್ ನನಗೆ ಕೇವಲ ಅಣ್ಣನಾಗಿರಲಿಲ್ಲ, ಅಪ್ಪನ ಸ್ಥಾನದಲ್ಲಿದ್ದ ಎಂದು ರೋಧಿಸಿದ. ಈ ಕೃತ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾನೆ. ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
