ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗ, ಜಗನ್ಮೋಹನ ಅರಮನೆ ಮುಂಭಾಗದ ಪರಕಾಲ ಮಠದ ಪಕ್ಕದ ದೀಕ್ಷಾಚಾರ್ ರಸ್ತೆಯಲ್ಲಿ ಒಳಚರಂಡಿ ಸಂಪೂರ್ಣ ಬಂದ್ ಆಗಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ ಎಂದು ನಾಗರೀಕರು ಅಸಹ್ಯ ವ್ಯಕ್ತಪಡಿಸಿದ್ದಾರೆ.
ರಸ್ತೆ ಕೊಳಕಿನಿಂದ ರಾಡಿಯಾಗಿದೆ ಆದರೆ ಕೂಗಳತೆ ದೂರದಲ್ಲಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ 15 ದಿನಗಳಿಂದ ಚರಂಡಿ ಬ್ಲಾಕ್ ಆಗಿದ್ದು, ಚೇಂಬರ್ನಿಂದ ಮಲಮಿಶ್ರಿತ ನೀರು ಹೊರಬಂದು ರಸ್ತೆಯ ಮೇಲೆ ಹರಿಯುತ್ತಿದೆ. ದುರ್ನಾತದಿಂದ ಸಾರ್ವಜನಿಕರು, ವ್ಯಾಪಾರಿಗಳು ಮತ್ತು ದೇವಸ್ಥಾನಕ್ಕೆ ಬರುವ ಭಕ್ತರು ಬೇಸತ್ತುಹೋಗಿದ್ದಾರೆ.
ಈ ಬಗ್ಗೆ ನಗರ ಪಾಲಿಕೆಯ ಅಧಿಕಾರಿಗಳಿಗೆ ಅನೇಕ ಬಾರಿ ದೂರವಾಣಿ ಮೂಲಕ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರು ಹೆಚ್ಚಾಗಿ ಓಡಾಡುವ ಪ್ರಮುಖ ರಸ್ತೆಯಲ್ಲೇ ಇಂತಹ ಅವ್ಯವಸ್ಥೆ ಇರುವುದು ಪಾಲಿಕೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ದಸರಾ ಹಬ್ಬ ಸಮೀಪಿಸುತ್ತಿರುವಾಗ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕಾದ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಚರಂಡಿಯನ್ನು ಸ್ವಚ್ಛಗೊಳಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
