ಮೈಸೂರು: ಮಂಡ್ಯದ ಶಿವಕುಮಾರ್ ಆರಾಧ್ಯ ಎಂಬವರು ಕನ್ನಡ ಚಳವಳಿಗಳ ಅಗ್ರಮಾನ್ಯ ನಾಯಕ ವಾಟಾಳ್ ನಾಗರಾಜ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.
ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಿವಕುಮಾರ್ ಆರಾಧ್ಯ ನನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ವಾಟಾಳ್ ನಾಗರಾಜ್ ಕನ್ನಡ ನಾಡಿನ ನೆಲ ಜಲ ಭಾಷೆ ಪರವಾಗಿ ಕಳೆದ 7 ದಶಕಗಳಿಂದ, ಹೋರಾಟ ಮಾಡುವ ಮೂಲಕ ರಾಜ್ಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ರಾಜ್ಯದಲ್ಲಿ ಕನ್ನಡ ನಾಡಿನ ವಿಚಾರಕ್ಕೆ ಏನೇ ಧಕ್ಕೆಯಾದರೂ ಮೊದಲು ಪ್ರತಿಭಟಿಸುವುದು ಅವರೇನೆ ಹಾಗೂ ವಿನೂತನ ಚಳವಳಿಗಳನ್ನು ನಡೆಸಿ ರಾಜ್ಯ, ಕೇಂದ್ರ ಸರ್ಕಾರದ ಗಮನವನ್ನು ಸೆಳೆಯುವುದರಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ ಎಂದು ತೇಜೇಶ್ ಲೋಕೇಶ್ ಗೌಡ ತಿಳಿಸಿದರು.
ವಾಟಾಳ್ ನಾಗರಾಜ್ ಎಂಬ ಹೆಸರಿಗೆ ಇಡೀ ಕರ್ನಾಟಕ, ಜತೆಗೆ ಅಂದಿನ ತಮಿಳ್ನಾಡಿನ ಮುಖ್ಯಮಂತ್ರಿಗಳಾಗಿದ್ದ ಕರುಣಾನಿಧಿ, ಜೈಲಲಿತಾರವರೇ ಬೆಚ್ಚಿ ಬೀಳುತ್ತಿದ್ದರು.
ಅಂತಹ ಮೇರು ಹೆಸರಿರುವ ಹಿರಿಯ ಕನ್ನಡ ಚಳವಳಿಗಾರರ ಬಗ್ಗೆ ಈ ಮಂಡ್ಯದ ಅಲ್ಪ ಶಿವಕುಮಾರ್ ಹಗುರವಾಗಿ ಮಾತನಾಡಿರುವುದರ ವಿರುದ್ಧ ಸರ್ಕಾರ ಸುಮೋಟೋ ಕೇಸ್ ದಾಖಲಿಸಿ, ಈತನನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ವಾಕ್ ಸ್ವಾತಂತ್ರ್ಯ ಇದೆ ಎಂದು ಯಾವ ವ್ಯಕ್ತಿಯು ಸಹ ಇನ್ನೊಬ್ಬರ ಮೇಲೆ ಇಷ್ಟೊಂದು ಹಗುರವಾಗಿ ಮಾತನಾಡುವುದಕ್ಕೆ ಕಡಿವಾಣ ಹಾಕಬೇಕು ಹಾಗೂ ಸರಕಾರ ಈತನನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಗೋಲ್ಡನ್ ಸುರೇಶ್, ಪ್ರಜೀಶ್, ಸಿಂದುವಳ್ಳಿ ಶಿವಕುಮಾರ್, ಕೆ ಎನ್ ನಾಗೇಗೌಡ, ಗಿರೀಶ್ ಹೆಚ್, ಡಾ. ಶಾಂತರಾಜೇ ಅರಸ್, ಮಧುವನ ಚಂದ್ರು , ಮಂಜುಳಾ, ತಾಯೂರು ಗಣೇಶ್, ಎಳನೀರು ರಾಮಣ್ಣ, ಸುಜಾತಾ, ಕುಮಾರ್, ದರ್ಶನ್ ಗೌಡ, ಪ್ರದೀಪ್, ಜ್ಯೋತಿ, ಹನುಮಂತಯ್ಯ, ಪ್ರಭಾಕರ , ಬಸವರಾಜು , ಶಿವರಾಂ ಗೌಡ, ನಾರಾಯಣ ಗೌಡ, ರಮೇಶ, ರವಿ ನಾಯಕ, ಮೂರ್ತಿ, ರವೀಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
