ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎ ಆರ್ ಎ ಐ) ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರಕಾರ ನೀಡಲಿರುವ ಪ್ರಸ್ತಾವಿತ ಜಾಗವನ್ನು ಆ ಸಂಸ್ಥೆಯ ಉನ್ನತಾಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಂಸ್ಥೆಯ ಹಿರಿಯ ಉಪ ನಿರ್ದೇಶಕರಾದ ವಿ.ಎ. ಪಂಖಾವಾಲ, ಡಾ. ಬಿ.ವಿ. ಶ್ಯಾಮಸುಂದರ ಹಾಗೂ ಹಿರಿಯ ಪ್ರಧಾನ ವ್ಯವಸ್ಥಾಪಕ ಗಿರೀಶ್ ತನವಾಡೆ ಅವರು ಮಂಡ್ಯದ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬಸರಾಳು ಸಮೀಪದಲ್ಲಿರುವ ಮದ್ದಿಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮಗಳ ಬಳಿ ಜಾವನ್ನು ವೀಕ್ಷಿಸಿದರು.
ಈ ಎರಡು ಗ್ರಾಮಗಳ ಬಳಿ ಸುಮಾರು 110 ಎಕರೆ ಸರಕಾರಿ ಭೂಮಿ ಲಭ್ಯವಿದೆ ಎಂದು ರಾಜ್ಯ ಸರಕಾರ ತಿಳಿಸಿದ್ದು, ಎಆರ್ಎಐ ತಂಡವು ಈ ಭೂಮಿಯನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿತು. ಅಲ್ಲದೆ, ಜಾಗಕ್ಕೆ ಸಂಬಂಧಿತ ಅಗತ್ಯ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆಯಿತು.
ಈ ಭೂಮಿ ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಅನುಕೂಲವಾಗಿದೆಯೇ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಈ ತಂಡದ ವರದಿಯ ನಂತರ ತಾಂತ್ರಿಕ ನಿಪುಣರ ತಂಡವು ಈ ಭೂಮಿಗಳನ್ನು ಪರಿಶೀಲಿಸಲಿದೆ.
ಭೂಮಿಯ ಸ್ವರೂಪ, ರಸ್ತೆ ಸಂಪರ್ಕ, ನೀರು, ವಿದ್ಯುತ್ ಸೇರಿ ಮೂಲಸೌಕರ್ಯಗಳ ಸಂಯೋಜನೆ ಸುಲಭ ಸಾಧ್ಯವೇ ಎಂಬುದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಭೂಮಿಯನ್ನು ವೀಕ್ಷಿಸಿದ ನಂತರ ಎಆರ್ಎಐ ಅಧಿಕಾರಿಗಳ ತಂಡವು ಮಂಡ್ಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಅಗತ್ಯವಿರುವ ಭೂಮಿ ಹೇಗಿರಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಅಧಿಕಾರಿಗಳು ಚರ್ಚಿಸಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ ಅವರು, ಎಆರ್ಎಐ ತಂಡವು ಬಸರಾಳು ಭೂಮಿಯನ್ನು ಪ್ರಾಥಮಿಕ ಪರಿಶೀಲನೆ ನಡೆಸಿದೆ. ಬಸರಾಳು ಹತ್ತಿರದ ಭೂಮಿ ಎಆರ್ಎಐ ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಿದೆ ಎಂದು ಹೇಳಿದೆಯೇ ವಿನಾ ಅಲ್ಲಿಯೇ ಕಾರ್ಯ ಸಾಧ್ಯತೆ ಆಗುತ್ತದೆಯೇ ಎಂಬುದನ್ನು ಹೇಳಿಲ್ಲ.
ಅಲ್ಲದೆ; ಈಗ ಬಂದಿರುವ ಮೂವರು ಅಧಿಕಾರಿಗಳ ತಂಡವು ಇಪ್ಪತ್ತು ದಿನಗಳಲ್ಲಿ ವರದಿ ನೀಡಲಿದ್ದು, ಆ ವರದಿ ಪರಿಶೀಲನೆ ನಂತರ ತಾಂತ್ರಿಕ ತಂಡ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಂಡ್ಯದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದ ಜನತೆಗೆ ಭರವಸೆ ನೀಡಿದ್ದರು.
ಇದೇ ಮಾರ್ಚ್ 14ರಂದು ಮಂಡ್ಯದ ವಿ.ಸಿ. ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಸಭೆಯಲ್ಲಿ ಮಾತನಾಡುತ್ತಾ, ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಹೇಳಿದ್ದರು. ಅದಾದ ಎರಡು ದಿನಗಳಲ್ಲಿಯೇ ಆ ಸಂಸ್ಥೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
