ಮಂಡ್ಯ: ಮಳವಳ್ಳಿ ಟಿಎಪಿಸಿಎಂಎಸ್ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ನಿರ್ದೇಶಕ ಚಂದಳ್ಳಿ ಶ್ರೀಧರ್ ಅವರ ಆರೋಪ ನಿರಾಧಾರವಾಗಿದೆ ಎಂದು ಅಧ್ಯಕ್ಷ ಎಂ. ಲಿಂಗರಾಜು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಎಪಿಸಿಎಂಎಸ್ನಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಶಾಸಕರ ಹಸ್ತಕ್ಷೇಪವಿದೆ ಎಂದು ಶ್ರೀಧರ್ ಆರೋಪಿಸಿದ್ದಾರೆ. ಆದರೆ ಶಾಸಕರು ಸಹಕಾರ ಸಂಘದ ಆಡಳಿತದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಶ್ರೀಧರ್ ತಮ್ಮ ಪ್ರಚಾರದ ಗಿಮಿಕ್ಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಅಧ್ಯಕ್ಷ ಹಾಗೂ ಲೆಕ್ಕ ಪರಿಶೋಧಕರು ಒಂದೇ ಗ್ರಾಮದವರಾಗಿದ್ದು, ಸಭೆಗೆ ತಪ್ಪು ವರದಿ ನೀಡಲಾಗುತ್ತಿದೆ ಎಂದು ಶ್ರೀಧರ್ ಹೇಳಿದ್ದಾರೆ. ಸಹಕಾರ ಸಂಘದ ನಿಯಮಾವಳಿಗಳ ಗಂಧಗಾಳಿಯೂ ಗೊತ್ತಿಲ್ಲದ ನೀವು ಅದರ ಬಗ್ಗೆ ಅಧ್ಯಯನ ಮಾಡಿ ಎಂದು ಹೇಳಿದರು.
2025ರ ಆಗಸ್ಟ್ನಲ್ಲಿ ಲೆಕ್ಕ ಪರಿಶೋಧಕರ ನೇಮಕವಾಗಿದೆ. ಅಕ್ಟೋಬರ್ನಲ್ಲಿ ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸಭೆಯಲ್ಲಿ ಸರ್ವಾನುಮತದಿಂದಲೇ ಅಧಿಕಾರಿಯ ನೇಮಕ ಮಾಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಸಂಘದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಸಂಬಂಧ ಈ ಹಿಂದಿನ ಆಡಳಿತ ಮಂಡಳಿಯೂ ಸಹಕಾರ ನಿಯಮಗಳನ್ವಯ 64ರ ತನಿಖೆಗೆ ಒಳಪಡಿಸಿತ್ತು. ಎರಡು ತಿಂಗಳ ಹಿಂದಷ್ಟೇ ಅದರ ವರದಿ ಬಂದಿದೆ. ಈಗಿನ ಆಡಳಿತ ಮಂಡಳಿಯ ವಿರುದ್ಧ ತನಿಖೆಗೆ ಕೆಲ ನಿರ್ದೇಶಕರು ಒತ್ತಾಯಿಸಿದ್ದು, ಈಗಲೂ ತನಿಖೆ ಮಾಡಲು ಇಲಾಖೆಗೆ ತಿಳಿಸಲಾಗಿದೆ.
ಲೆಕ್ಕಪರಿಶೋಧನೆ ಹಾಗೂ ತನಿಖೆಯಲ್ಲಿ ತಪ್ಪೆಂದು ಸಾಬೀತಾದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಆರೋಪ ಸಾಬೀತು ಮಾಡಲು ವಿಫಲವಾದರೆ ಶ್ರೀಧರ್ ತಮ್ಮ ನಿರ್ದೇಶಕ ಸ್ಥಾನ ತ್ಯಜಿಸಲಿ ಎಂದು ಅಧ್ಯಕ್ಷರು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಎಸ್. ಮಾಲಾಶ್ರೀ, ನಿರ್ದೇಶಕರಾದ ಕೆ.ಜೆ. ದೇವರಾಜು, ಎಂ. ಮಾದಯ್ಯ, ವಿ.ಎನ್. ಮನು, ಎನ್. ಸತೀಶ್, ದಿಲೀಪ್ಕುಮಾರ್ ಉಪಸ್ಥಿತರಿದ್ದರು.
ರಸೀದಿ ಪುಸ್ತಕ ವಾಪಸ್ ಕೊಡದ ಆರೋಪ: ಶ್ರೀಧರ್ ವಿರುದ್ಧ ಪ್ರಕರಣ ದಾಖಲು
ಮಳವಳ್ಳಿ: ತಡ ರಾತ್ರಿ ತಳಗವಾದಿ ಟಿಎಪಿಸಿಎಂಎಸ್ ಸೊಸೈಟಿಯ ಸಿಇಒ ಶಿವಕುಮಾರ್ ಅವರಿಂದ ರಸೀದಿ ಪುಸ್ತಕವನ್ನು ಪಡೆದುಕೊಂಡು ವಾಪಸ್ ಕೊಡದೆ ಇರುವ ಬಗ್ಗೆ ನಿರ್ದೇಶಕ ಚಂದಳ್ಳಿ ಶ್ರೀಧರ್ ವಿರುದ್ಧ ಮಳವಳ್ಳಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊಸೈಟಿಯ ಆಡಳಿತ ಸಂಬಂಧಿತ ದಾಖಲೆಗಳನ್ನು ಕೇಳಿ ಪಡೆದು ಹಿಂತಿರುಗಿಸಿಲ್ಲ ಎಂಬ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
