ಮೈಸೂರು: ಬೀಗ ಹಾಕಿ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬೀಗ ಮುರಿದು 20 ಲಕ್ಷ ಮೌಲ್ಯದ 214 ಗ್ರಾಂ ಆಭರಣ ಕಳವು ಮಾಡಿದ ಘಟನೆ ಮೈಸೂರಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭೂಗತಗಳ್ಳಿಯ ಐ ಬಿಲ್ಡಿಂಗ್ ಎನ್ಕ್ಲೇವ್ ಲೇಔಟ್ನ ನಿವಾಸಿ ಹರ್ಷಿತ್ ಮೂರ್ತಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಹರ್ಷಿತ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.ಅವರ ಪೋಷಕರು ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು. ಸಂಜೆ ಮನೆಗೆ ವಾಪಸ್ ಬಂದಾಗ ಮುಖ್ಯ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ.
ಆತಂಕಗೊಂಡು ಒಳಗೆ ಹೋಗಿ ಪರಿಶೀಲಿಸಿದಾಗ, ಮಲಗುವ ಕೋಣೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳುವಾಗಿರುವುದು ಗೊತ್ತಾಗಿದೆ.
ಕಳ್ಳರು ಕಪಾಟನ್ನು ಮೀಟಿ ಒಳಗಿದ್ದ 214 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದಾರೆ. ಕಳವಾದ ಚಿನ್ನದ ಅಂದಾಜು ಮೌಲ್ಯ 20 ಲಕ್ಷ ಎಂದು ತಿಳಿದುಬಂದಿದೆ.
ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ದಕ್ಷಿಣ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಸಂಬಂಧ ಹರ್ಷಿತ್ ಮೂರ್ತಿ ಅವರು ನೀಡಿದ ದೂರಿನ ಮೇರೆಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗೆ 3 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗೆ ಬೀಗ ಹಾಕಿ ಹೊರಗೆ ಹೋಗುವಾಗ
ಅಕ್ಕ-ಪಕ್ಕದವರಿಗೆ ಮಾಹಿತಿ ನೀಡಿ, ಅನುಮಾನಾಸ್ಪದ ಚಲನವಲನದ ಮೇಲೆ ನಿಗಾ ಇಡಲು ಹೇಳಿ,
ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ನಲ್ಲಿ ಇಡಿ,
ಸಿಸಿಟಿವಿ ಮತ್ತು ಸ್ಮಾರ್ಟ್ ಲಾಕ್ ಅಳವಡಿಸಿ
ಸಂಶಯ ಕಂಡ ತಕ್ಷಣ 112 ಗೆ ಕರೆ ಮಾಡಿ ಎಂದು ಸಾರ್ವಜನಿಕ ರಿಗೆ ಪೊಲೀಸರು ಸಲಹೆ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ನಗರದಲ್ಲಿ ಬೀಗ ಮುರಿದು ಕಳವು ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಿದ್ದಾರೆ ಆತಂಕ ಪಡಬೇಕಿಲ್ಲ,ಆದರೂ ನಿಮ್ಮ ಹುಷಾರಿನಲ್ಲಿ ಇರಬೇಕು.
