ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಿಗೆ ರಸ್ತೆ ಬದಿಯಲ್ಲೇ ಚಿರತೆ ಕಾಣಿಸಿಕೊಂಡಿದ್ದು ಕೆಲಕಾಕ ಆತಂಕ ಮೂಡಿತ್ತು.
ವಾಹನವೊಂದು ಮುಂದೆ ಹೋಗುತ್ತಿದ್ದಂತೆ ಚಿರತೆ ಮರಗಳ ಮಧ್ಯೆ ಕುಳಿತು ಮಿಶ್ರಮಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಹನೂರು ಪಟ್ಟಣದ ಕಂದಾಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಪ್ ಹಾಗೂ ಕುಟುಂಬಸ್ಥರು ಶ್ರೀ ಕ್ಷೇತ್ರ ಮಹದೇಶ್ವರ ಬೆಟ್ಟಕ್ಕೆ ಶುಕ್ರವಾರ ಬೆಳಿಗ್ಗೆ ತೆರಳುತ್ತಿದ್ದಾಗ ರಸ್ತೆಯ ಬಲಬದಿಯಿಂದ ಎಡಬದಿಗೆ ಚಿರತೆ ರಸ್ತೆ ದಾಟಲು ಬರುತ್ತಿತ್ತು, ಆದರೆ ವಾಹನ ಬರುತ್ತಿದ್ದಂತೆ ವಾಪಸ್ ಹೋಗಿ ಮರಗಳ ಮಧ್ಯಸ ಕುಳಿತು ನೆರಳಿನಲ್ಲಿ ವಿಶ್ರಮಿಸುತ್ತಿದೆ. ಇದನ್ನು ಪ್ರದೀಪ್ ಸ್ನೇಹಿತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಜತೆಗೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ದ್ವಿಚಕ್ರ ವಾಹನದಲ್ಲಿ ಬರುವ ಭಕ್ತಾದಿಗಳು ಮುನ್ನೆಚ್ಚರಿಕೆ ವಹಿಸುವಂತೆ ಪ್ರದೀಪ್ ಮನವಿ ಮಾಡಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಇದಾದ ಕೆಲವು ದಿನಗಳಲ್ಲಿಯೇ ಪಾದಯಾತ್ರೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ಮಾಡುತ್ತಿದ್ದರು.ಆದರು ಚಿರತೆ ಆಗಾಗ ರಂಗಸ್ವಾಮಿ ಒಡ್ಡು ಹಾಗೂ ಶನೇಶ್ವರ ದೇವಸ್ಥಾನದ ಸಮೀಪ ಕಾಣಿಸಿಕೊಳ್ಳುತ್ತಲೇ ಇತ್ತು.
ಆದಾಗ್ಯೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವಲ್ಲಿ ವಿಫಲರಾಗಿದ್ದಾರೆ.
ಅದೇ ರೀತಿ ಶುಕ್ರವಾರವೂ ಸಹ ತಾಳುಬಟ್ಟದಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ 7ನೇ ತಿರುವಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ.
ಇನ್ನು ಮುಂದಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಚಿರತೆ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಮುಂದೆ ಯಾವುದಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ.
