ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಬ್ಯಾಂಕ್ ಉದ್ಯೋಗಿ ಪತ್ನಿಯ ಕೊಂದು ನಂತರ ತಂಗಿಯನ್ನೂ ಹತ್ಯೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ.
ಎಸ್ಬಿಐ ಬ್ಯಾಂಕ್ ನೌಕರ ಪತ್ನಿ ಕೆಲಸ ಮಾಡುತ್ತಿದ್ದ ಕಚೇರಿಯ ಹೊರಗಡೆ ಆಕೆಗೆ ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ಮನೆಗೆ ತೆರಳಿ ತನ್ನ ತಂಗಿಯನ್ನೂ ಕೊಂದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಸ್ಬಿಐ ನೌಕರ ಮಾನಸ್ ವಾಜಪೇಯಿ (38) ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ನಗರದ ಐಷಾರಾಮಿ ಪ್ರದೇಶವಾದ ಗೋಮತಿ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಖೆಯ ಹೊರಗಡೆ ತನ್ನ ಪತ್ನಿ ದಿವ್ಯಾ ಮಿಶ್ರಾಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
38 ವರ್ಷದ ಮಾನಸ್ ವಾಜಪೇಯಿ ತನ್ನ ಪತ್ನಿ ದಿವ್ಯಾ ಕೆಲಸ ಮಾಡುತ್ತಿದ್ದ ಬ್ಯಾಂಕ್ನಿಂದ ಆಕೆಯನ್ನು ಹೊರಗೆ ಕರೆಸಿಕೊಂಡಿದ್ದಾನೆ,ನಂತರ ಇಬ್ಬರ ನಡುವೆ ಮಾತುಕತೆ ನಡೆದು ಜಗಳಕ್ಕೆ ತಿರುಗಿದೆ. ನಂತರ ಮಾನಸ್ ಆಕೆಗೆ ಗುಂಡಿಕ್ಕಿ ಕೊಂದಿದ್ದಾನೆ. ತಕ್ಷಣ ದಿವ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು,ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದಿವ್ಯಾ ಮತ್ತು ಮಾನಸ್ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ, ಕಳೆದ 1 ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಹತ್ಯೆಯ ನಂತರ ಆರೋಪಿ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಕೊಲೆಯ ಕುರಿತು ಬರೆದುಕೊಂಡಿದ್ದ.ಪತ್ನಿ ನನಗೆ ವಂಚನೆ ಮಾಡಿದ್ದಾಳೆ, ಹೀಗಾಗಿ ಆಕೆಯನ್ನು ಹತ್ಯೆ ಮಾಡಿದ್ದೇನೆ ಎಂದು ಬರೆದಿದ್ದ.
ಅಷ್ಟೇ ಅಲ್ಲದೆ, ಈಗ ನನ್ನ ತಂಗಿಯನ್ನೂ ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಾಟ್ಸಾಪ್ನಲ್ಲಿ ಬರೆದುಕೊಂಡಿದ್ದ.
ಹೀಗೆ ಬರೆದ ನಂತರ ಮನೆಗೆ ತೆರಳಿದ ಆತ ತನ್ನ ತಂಗಿಯನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಿಳೆಗೆ ಗುಂಡೇಟು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ ಆರಂಭಿಸಿದ್ದಾರೆ.
