ಕುಶಾಲನಗರ: ಕಾವೇರಿ ನೀರು ನಿಯಂತ್ರಣ ಮಂಡಳಿ ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಹರಿಸುವಂತೆ ಸೂಚಿರುವುದನ್ನು ವಿರೋಧಿಸಿ ಇಂದು ಕುಶಾಲನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಿ ಎ ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕುಶಾಲನಗರದ ಪ್ರವಾಸಿ ಮಂದಿರದ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾವೇರಿ ನದಿ ನೀರಿಗಾಗಿ ನಮ್ಮ ಹೋರಾಟ ಎಂಬ ಶೀರ್ಷಿಕೆಯಡಿ ಹೋರಾಟ ನಡೆಸಿದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕೂಡ ಮಧ್ಯಪ್ರವೇಶಿಸಿ ತಮಿಳುನಾಡಿಗೆ ನೀರು ಬಿಡುವ ಸಂಬಂಧ ಕಾವೇರಿ ನೀರು ನಿಯಂತ್ರಣ ಮಂಡಳಿ ಜೊತೆ ಚರ್ಚಿಸಬೇಕೆಂದು ಆಗ್ರಹಿಸಿದರು.
ನಮ್ಮ ಬೆಳೆಗಳಿಗೆ ನೀರಿಲ್ಲ, ಕುಡಿಯಲು ನೀರಿಲ್ಲ, ಮಳೆ ಕೈಕೊಟ್ಟಿದೆ ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಹೇಗೆ ಬಿಡುವುದು ಎಂದು ಬಿ.ಎ ದಿನೇಶ್ ಶೆಟ್ಟಿ, ಚೆಲುವರಾಜು ಮತ್ತು ಇತರರು ಖಾರವಾಗಿ ಪ್ರಶ್ನಿಸಿದರು.
ಕೂಡಲೇ ಕಾವೇರಿ ನೀರು ನಿಯಂತ್ರಣ ಮಂಡಳಿಗೆ ಸರ್ಕಾರಗಳು ಮೇಲ್ಮನವಿ ಸಲ್ಲಿಸಬೇಕು ಯಾವುದೇ ಕಾರಣಕ್ಕೂ ನೀರು ಬಿಡಬಾರದು ಒಂದು ವೇಳೆ ನೀರು ಬಿಟ್ಟರೆ ನಮ್ಮ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡರ ಬಣದ ಪುಟ್ಟಸ್ವಾಮಿ ಎಸ್ ಎನ್, ಪ್ರಧಾನ ಕಾರ್ಯದರ್ಶಿ ವಿ.ಕೃಷ್ಣ, ನಿರ್ಮಲ ಸುರೇಶ್, ರಾಜೇಗೌಡ ಕೆ.ಎಲ್,ಗಂಗಾ ಕುರುಮೇಶ್ ನಾಯಕ,ಎಂ.ಎಸ್. ಮಣಿಕಂಠ,ನಾಗರಾಜು, ವಿ. ಹೆಚ್ ಪುಟ್ಟಮ್ಮ, ವಿನ್ಸೆಂಟ್ ಲೋಬೋ, ಪ್ರೇಮ ರಾಮಚಂದ್ರ,ಸರಳ ರಾಮಣ್ಣ, ಮನೋಜ್ ಎಂ, ಸೌಂದರ್ಯ,ಪ್ರಶಾಂತ್, ನಿತಿನ್ ಮಹೇಶ್, ಅಶೋಕ್, ಮತ್ತಿತರರು ಪಾಲ್ಗೊಂಡಿದ್ದರು.
