ನವದೆಹಲಿ: ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಡಿಸಿಎಂ ಯಾರು ಅವರಿಗೆ ಆ ಅಧಿಕಾರ ಯಾರು ಕೊಟ್ಟರು ಎಂದು ಕೇಂದ್ರಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಡಿಸಿಎಂ ಸಭೆ ನಡೆಸೊದಾದರೆ ರಾಜ್ಯದಲ್ಲಿರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಹೆಚ್ ಡಿ ಕೆ, ಡಿಸಿಎಂ ಅವರು ಮಂಗಳವಾರ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅದಕ್ಕೆ ಗೃಹ ಸಚಿವರು ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ನನಗೆ ನೈಜ ಘಟನೆಗಳ ಬಗ್ಗೆ ಮಾಹಿತಿ ಕೊಡುವವರು ಇದ್ದಾರೆ. ಅದರ ಸತ್ಯಾಸತ್ಯತೆ ಪರಿಶೀಲಿಸಿ ಆ ಬಳಿಕ ನಾನು ಮಾಧ್ಯಮಗಳಿಗೆ ವಿವರಿಸಿದ್ದೇನೆ. ಜನತೆಗೆ ಸತ್ಯ ತಿಳಿಯಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಸಿಎಂ ಅವರು ಯಾವ ಅಧಿಕಾರದ ಮೇಲೆ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ, ಗೃಹ ಇಲಾಖೆಯಲ್ಲಿ ಇವರ ಹಸ್ತಕ್ಷೇಪ ಯಾಕೆ ಡಿಸಿಎಂ ಎಂದರೆ ಅವರು ಮಂತ್ರಿ ಅಷ್ಟೇ. ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಗೆ ಅಧಿಕಾರಿಗಳು ಯಾವ ಮಾಹಿತಿ ಕೊಡುತ್ತಾರೆ ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಘಟನೆಗೆ ಕಾರಣರಾದ ಶಾಸಕರ ವಿರುದ್ದವೇ ಸತ್ಯಶೋಧನೆ ಸಮಿತಿಯ ಮುಂದೆ ದೂರು ನೀಡಿದ್ದಾರೆ. ಹಾಗಾದರೆ ತನಿಖೆಯ ಹಣೆಬರಹ ಏನು ಎಂದು ತರಾಟೆಗೆ ತೆಗೆದುಕೊಂಡರು.
ಬಳ್ಳಾರಿ ನಗರದಲ್ಲಿ ನಡೆದ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ತರಾತುರಿಯಲ್ಲಿ ಕೆಲಸ ಮಾಡುತ್ತಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬೀದಿಯಲ್ಲಿ ಗುಂಡು ಹಾರಿಸ್ತಾರಾ, ಮರಣೋತ್ತರ ಪರೀಕ್ಷೆ ನಡೆದ ನಂತರ ಕೊಲೆಯಾದ ಕಾರ್ಯಕರ್ತನ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟು ಹಾಕಿದ್ದು ಯಾಕೆ,ಕುಟುಂಬದವರಿಗೆ ಅಂತಿಮ ವಿಧಿ ವಿಧಾನ ನಡೆಸುವುದಕ್ಕೆ ಅವಕಾಶವನ್ನೂ ನೀಡದೆ ಮೃತದೇಹವನ್ನು ತರಾತುರಿಯಲ್ಲಿ ಸುಟ್ಟಿದ್ದು ಯಾಕೆ? ಇದಕ್ಕೆಲ್ಲಾ ಸರ್ಕಾರ ಉತ್ತರ ಕೊಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಬಳ್ಳಾರಿಯಲ್ಲಿ ನಡೆದದ್ದು ಅಹಿತರ ಘಟನೆ, ಸಾವು ಪ್ರಕರಣ ಎಲ್ಲರಿಗೂ ನೋವು ತರುತ್ತದೆ. ಕಳೆದ ಒಂದು ವಾರದಿಂದ ಹಲವು ನಾಯಕರು ಬಳ್ಳಾರಿಗೆ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಸತ್ಯಶೋಧನೆ ಮಾಡುತ್ತೇವೆ ಎಂದು ಹೋಗಿದ್ದರು! ಅಲ್ಲಿ ಅವರೇನು ಸತ್ಯ ಶೋಧನೆ ಮಾಡಿದರು ಎಂಬುದನ್ನು ಜನರ ಮುಂದೆ ಹೇಳಲಿ ಎಂದು ಹೆಚ್ ಡಿ ಕೆ ಒತ್ತಾಯಿಸಿದರು.
ನನ್ನ ಮತ್ತು ಜನಾರ್ಧನ ರೆಡ್ಡಿ ನಡುವೆ ನಡೆದ ಗಲಾಟೆ ಹಳೇ ಕಥೆ. ಅದನ್ನು ಈಗ ಮುಂದೆ ತಂದು ಅವರು ಏನು ಮಾಡಲು ಸಾಧ್ಯ? ನಾನು ಯಾವುದೋ ರಾಗದ್ವೇಷ ಇಲ್ಲದೇ ಮಾಧ್ಯಮಗಳ ಮುಂದೆ ಸತ್ಯ ಹೇಳಿದ್ದೇನೆ. ಕಾಂಗ್ರೆಸ್ ಜತೆ ಕೂಡ ಸರ್ಕಾರ ಮಾಡಿದ್ದೇನೆ. ಆಗ ಬಂಡೆ ತರ ನಿಂತಿದ್ದು ಇವರೇ ತಾನೇ. ಎಲ್ಲರೂ ಜೋಡೆತ್ತು ಎಂದರು. ಆಮೇಲೆ ಆಗಿದ್ದು ಏನು ಬೆನ್ನಿಗೆ ಚೂರಿ ಹಾಕಿ ವಿಶ್ವಾಸ ದ್ರೋಹ ಎಸಗಿದರು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
