ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ಪಟ್ಟಣದಲ್ಲಿ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಅಂತರಜಿಲ್ಲಾ ಜಾಲವನ್ನು ಮೂಡಿಗೆರೆ ಠಾಣೆ ಪೊಲೀಸರು ಭೇದಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ,18,000 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಮಹಮದ್ ಅಲಿ ಮತ್ತು ಮೂಡಿಗೆರೆ ಮೂಲದ ಮಹೇಶ್ ಬಂಧಿತ ಆರೋಪಿಗಳು.
ಮೂಡಿಗೆರೆ ಪಟ್ಟಣದ ನೂತನ ಲೇಔಟ್ ಪ್ರದೇಶದಲ್ಲಿ ನಕಲಿ ನೋಟುಗಳನ್ನು ಸಾರ್ವಜನಿಕರಿಗೆ ಚಲಾಯಿಸಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 200 ರೂ ಮುಖಬೆಲೆಯ ಒಟ್ಟು 90 ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ನಕಲಿ ನೋಟುಗಳ ಮೇಲೆ ‘Reserve Bank of India’ ಬದಲಿಗೆ ‘Biserv Bank of India’ (ಅಥವಾ Biserve Bank) ಎಂದು ತಪ್ಪಾಗಿ ಮುದ್ರಿಸಲಾಗಿತ್ತು. ಈ ಮುದ್ರಣ ದೋಷವೇ ನೋಟುಗಳು ನಕಲಿ ಎಂಬುದನ್ನು ಪೊಲೀಸರು ಸುಲಭವಾಗಿ ಪತ್ತೆಹಚ್ಚಲು ಪ್ರಮುಖ ಕಾರಣ.
ಮಂಗಳೂರಿನಿಂದ ಮಹಮದ್ ಅಲಿ ಖೋಟಾ ನೋಟುಗಳನ್ನು ತಂದು, ಸ್ಥಳೀಯ ನಿವಾಸಿ ಮಹೇಶ್ ಸಹಾಯದೊಂದಿಗೆ ಮೂಡಿಗೆರೆ ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಸಂಚು ರೂಪಿಸಿದ್ದ.
ಈ ಜಾಲದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಮತ್ತು ಈ ನೋಟುಗಳನ್ನು ಎಲ್ಲಿ ಮುದ್ರಿಸಲಾಗುತ್ತಿತ್ತು ಎಂಬ ಬಗ್ಗೆ ಮೂಡಿಗೆರೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
