(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಕಡಿತಗೊಳಿಸಿ ರುವುದನ್ನು ಖಂಡಿಸಿ ತಾಲ್ಲೂಕು ನಾಯಕರ ಸಂಘ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ನಾಯಕ ಜನಾಂಗದ ಗಡಿಮನೆ, ಕಟ್ಟೆ ಮನೆ ಮತ್ತು ಕಸಬಾ ಮನೆಯ ಯಜಮಾನರು ಮತ್ತು ಕುಲಸ್ಥರು ಪಟ್ಟಣದ ದೊಡ್ಡ ನಾಯಕರ ಬೀದಿಯಿಂದ ಹೊರಟು ಚಿಕ್ಕ ನಾಯಕರ ಬೀದಿ, ಡಾ.ಅಂಬೇಡ್ಕರ್ ರಸ್ತೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆ ಅನುಕ್ರಮವಾಗಿ ಶೇ 17 ಮತ್ತು ಶೇ.6.95 ಇರುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ ಮತ್ತು ಎಸ್.ಟಿ ಪಂಗಡದವರಿಗೆ ಮೀಸಲಾತಿ ನೀಡಬೇಕೆಂಬುದು ಭಾರತದ ಸಂವಿಧಾನದ ನಿರ್ದೇಶನವಾಗಿದೆ.
ಇದರ ಅನುಗುಣವಾಗಿ ಲೋಕಸಭೆ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿರುತ್ತದೆ. SCP/TSP ಕಾನೂನಿನಡಿ ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕ ರಾಜ್ಯದ ಆಯವ್ಯಯದಲ್ಲಿ ಎಸ್.ಸಿ ಮತ್ತು ಎಸ್.ಟಿ ಪಂಗಡಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. ರಾಜಕೀಯ ಮೀಸಲಾತಿ ಜೊತೆಗೆ 2004-2005 ರಿಂದ ಕೇಂದ್ರಸರ್ಕಾರವು ಎಸ್.ಸಿ ಮತ್ತು ಎಸ್.ಟಿ ಜನಸಂಖ್ಯೆಗೆ ಅನುಸಾರವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿರುತ್ತದೆ, ಕರ್ನಾಟಕ ರಾಜ್ಯದಲ್ಲಿಯೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಎಸ್.ಸಿ ಮತ್ತು ಎಸ್.ಟಿ ಜನಸಂಖ್ಯೆಗೆ ಅನುಗುಣವಾಗಿ ಅಂದರೆ 15% ಬದಲು 17% ಹಾಗೂ 3% ಬದಲು 7% ಮೀಸಲಾತಿ ಯನ್ನು ನೀಡಬೇಕೆಂದು ದಶಕಗಳಿಂದ ನಾವುಗಳು ಮಾಡಿದ ಹೋರಾಟದ ಪರಿಣಾಮ ಹಾಗೂ ಕರ್ನಾಟಕ ಉಚ್ಚನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 16852/2015 ರಲ್ಲಿ ಕರ್ನಾಟಕ ನಾಯಕ ವಿದ್ಯಾರ್ಥಿ ಸಂಘವು ಎಸ್.ಸಿ ಮತ್ತು ಎಸ್.ಟಿ ಮೀಸಲಾತಿಯನ್ನು ಹೆಚ್ಚಿಸಲು ದಾಖಲಿಸಿದ ಮನವಿ ಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವುದರಿಂದ ಈ ಕುರಿತು ತೀರ್ಮಾನ ಕೈಗೊಳ್ಳಲು ಮತ್ತು ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸಲು 22/7/2017 ರಂದು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗ ಮೋಹನದಾಸ್ ನೇತೃತ್ವದಲ್ಲಿ ಆಯೋಗ ನೇಮಿಸಿತ್ತು.
ಈ ಆಯೋಗವು ವ್ಯಾಪಕ ಅಧ್ಯಯನ ಕೈಗೊಂಡು ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಪಮಾಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 15% ಮತ್ತು 3% ಬದಲು ಕ್ರಮವಾಗಿ 17% ಮತ್ತು 7%ಗೆ ಹೆಚ್ಚಿಸಲು 2-07-2020 ರಂದು ವರದಿ ಸಲ್ಲಿಸಿತ್ತು. ಈ ವರದಿಯನ್ನು ಅವಲೋಕಿಸಲು ರಾಜ್ಯ ಸರ್ಕಾರ ಮತ್ತೊಂದು ಆಯೋಗವನ್ನು ನ್ಯಾಯಮೂರ್ತಿ ಸುಭಾಷ್ ಆಡಿ ಅವರ ನೇತೃತ್ವದಲ್ಲಿ ನೇಮಕಮಾಡಿತ್ತು.
ಈ ಆಯೋಗವು 7-10-2022 ರಂದು ನೀಡಿದ ವರದಿಯಲ್ಲೂ ಸಹ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ 17% ಮತ್ತು 7%ಅನುಕ್ರಮವಾಗಿ ನೀಡಲು ವರದಿ ಮಾಡಲಾಗಿತ್ತು.
ಈ ಎಲ್ಲಾ ಕಾರಣಗಳಿಂದ ಸರ್ವ ಪಕ್ಷಗಳ ಸಹಕಾರದಿಂದ ರಾಜ್ಯ ಸರ್ಕಾರಿ “ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತಪಂಗಡಗಳು ಅಧಿನಿಯಮ 2022 ನನ್ನು ಜಾರಿಗೆ ತರಲಾಯಿತು.
ಈ ಕಾನೂನು ಜಾರಿಯಾದಾಗಿನಿಂದ ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಿಸಿದರೆ ಮಾತ್ರ ಕಾನೂನು ಊರ್ಜಿತವಾಗುತ್ತದೆ ಇಲ್ಲದಿದ್ದರೆ ತೊಂದರೆಯಾಗುತ್ತದೆ ಆದಕಾರಣ ಈ ಕಾನೂನನ್ನು 9ನೇ ಷೆಡ್ಯೂಲ್ ಗೆ ಸೇರಿಸಲು ಕ್ರಮವಹಿಸುವಂತೆ ಒತ್ತಾಯ ಮಾಡುತ್ತಾ ಬಂದಿದ್ದೇವೆ ಎಂದು ಪ್ರತಿಭಟನಾ ನಿರತರು ಹೇಳಿದರು.
23-3-2023 ರಂದು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಪತ್ರ ಬರೆದು ಸದರಿ ಕಾನೂನನ್ನು ಸಂವಿಧಾನದ 9ನೇ ಷಡ್ಯೂಲ್ಗೆ ಸೇರಿಸಲು ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರು 11-05-2023 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸದರಿ ವಿಷಯವು ತಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲವೆಂದು ತಿಳಿಸಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಬುಡಕಟ್ಟು ಜನಾಂಗದ ಇಲಾಖೆಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದರು, ಆದರೆ ರಾಜ್ಯ ಸರ್ಕಾರ ಈ ವಿಷಯ ಕುರಿತು ಅನೇಕ ವರ್ಷಗಳ ಕಾಲ ಯಾವುದೇ ರೀತಿಯ ಕ್ರಮ ಜರುಗಿಸದೇ ಮೌನವಹಿಸಿದೆ ಎಂದು ವಿಷಾದಿಸಿದರು.
2022ರ ಕಾನೂನಿನ ಶೇ.56 ಮೀಸಲಾತಿಯ ರೀತಿ 2023-2024.2024-2025 ನೇಸಾಲಿನಲ್ಲಿ ಎಸ್.ಸಿ ಮತ್ತು ಎಸ್. ಟಿ ಹಾಗೂ ಇತರೆ ಹಿಂದುಳಿದ ವರ್ಗದ ಜನರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 56 ಮೀಸಲಾತಿ ಅಡಿಯಲ್ಲಿ ಪ್ರವೇಶ ಮತ್ತು ಉದ್ಯೋಗವನ್ನು ಪಡೆದಿದ್ದಾರೆ. ಆದರೆ ಇತ್ತೀಚಿನ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಶೇ 56 ಮೀಸಲಾತಿ ಕಾನೂನಿಗೆ ತಡೆಯಾಜ್ಞೆ ನೀಡಿರುವ ಕಾರಣ ಎಸ್.ಸಿ ಮತ್ತು ಎಸ್.ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕೆ ಆಘಾಧ ಹಿನ್ನಡೆಯಾಗಿದೆ. ಈ ಕಾರಣದಿಂದ ನಾವು ಮಾಡಿದ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ 2025ರ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಜರುಗಿದ ಅಧಿವೇಶನದಲ್ಲಿ ಸರ್ವ ಸಮ್ಮತ ನಿರ್ಣಯವನ್ನು ಕೈಗೊಂಡು ಸದರಿ ಕಾನೂನನ್ನು ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಿಸಲು ಒತ್ತಾಯ ಮಾಡಲಾಯಿತು.
ಆದರೆ ಇದುವರೆವಿಗೂ ರಾಜ್ಯ ಸರ್ಕಾರವು ಸದರಿ ಕಾನೂನನ್ನು 9ನೇ ಷೆಡ್ಯೂಲ್ ಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಯಾವುದೇ ರೀತಿಯ ಒತ್ತಡವನ್ನು ತರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿಗೆ ಬುಡಕಟ್ಟು ಜನಾಂಗದ ಇಲಾಖೆಯ ಪ್ರಧಾನಕಾರ್ಯದರ್ಶಿ ಯವರು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗ ಕಾರ್ಯದರ್ಶಿಯವರಿಗೆ ಪತ್ರಬರೆದು ಈ ವಿಚಾರವಾಗಿ ಮಾರ್ಗದರ್ಶನ ನೀಡಬೇಕೆಂದು ಕೋರಿರುತ್ತಾರೆ ಇದು ಕೇವಲ ತೋರುಗಾರಿಕೆ ಮತ್ತು ಕಣ್ಣು ಒರೆಸುವ ಪುಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಮೊದಲು ಸರ್ವಪಕ್ಷ ಸಭೆಯನ್ನು ಕರೆಯಬೇಕು,ಸರ್ವ ಪಕ್ಷ ನಿಯೋಗವನ್ನು ಪ್ರಧಾನ ಮಂತ್ರಿಗಳ ಬಳಿಗೆ ಕೊಂಡಯ್ಯಬೇಕು, ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಳಿಸಲು ಸಮರ್ಪಕ ವಕೀಲರನ್ನು ನೇಮಕ ಮಾಡಿ ತಡೆಯಾಜ್ಞೆ ತೆರವಿಗೆ ಅರ್ಜಿ ಹಾಕಬೇಕು, ತಡೆಯಾಜ್ಞೆ ತೆರವಾಗದಿದ್ದರೆ ವಿಶೇಷ -ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲು ಮಾಡಬೇಕು. ಈ ವಿಚಾರವಾಗಿ ಎಸ್.ಸಿ ಮತ್ತು ಎಸ್.ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳ ಹಾಗೂ ಮುಖಂಡರುಗಳ ತುರ್ತು ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಎಸ್.ಸಿ ಮತ್ತು ಎಸ್.ಟಿ ವರ್ಗಗಳ ಸುಳ್ಳು, ಜಾತಿ ಪ್ರಮಾಣ ಪತ್ರಗಳನ್ನು ಲಕ್ಷಾಂತರ ಜನರು ಹೊಂದಿ ಸೌಲಭ್ಯಗಳನ್ನು ಪಡೆಯುತ್ತಿರುವವರ ಮೇಲೆ ಹಾಗೂ ಸುಳ್ಳು, ಜಾತಿ ಪ್ರಮಾಣ ಪತ್ರ ಗಳನ್ನು ನೀಡುತ್ತಿರುವ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಪ್ರತಭಟನಾಕಾರರು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಂಡು ಈ ವರ್ಗಗಳಿಗೆ ನ್ಯಾಯದೊರಕಿಸಿ ಕೊಡಬೇಕು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ನಮ್ಮ ರಾಜ್ಯದ ಎಲ್ಲಾ ಸಂಸದರು ಶಾಸಕರು ಮತ್ತು ಮಂತ್ರಿಗಳು ಒತ್ತಡ ಹೇರಿ ಶೇ.56 ಮೀಸಲಾತಿ ಕಾನೂನನ್ನು ಸಂವಿಧಾನದ 2ನೇ ಷೆಡ್ಯೂಲ್ ನಲ್ಲಿ ಸೇರಿಸುವಂತೆ ಹೋರಾಟಮಾಡಬೇಕೆಂದು ಕೋರಿದರು.
ನಂತರ ಶಿರೆಸ್ತದಾರ್ ಕೃಪಕಾರ್ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಾಯಕ ಜನಾಂಗದ ಗಡಿ ಮನೆ ಯಜಮಾನರು ಪ್ರಸಾದ್, ಮೂರ್ತಿ, ವೆಂಕಟಾಚಲ, ಗವಿರಾಯ ನಾಯಕ, ಪಾಳ್ಯ ಕಟ್ಟೆ ಮನೆ ದೊಡ್ಡ ಸೀಗನಾಯಕ, ಶಿವಪ್ರಸಾದ್ ನಾಯಕ, ದುಂಡುಮಾದ ನಾಯಕ, ವಿಶ್ವಮೂರ್ತಿ ನಾಯಕ, ಸೀಗನಾಯಕ,ಕಸಬಾ ಯಜಮಾನರು ಚಿಕ್ಕಮಾದನಾಯಕ, ಸುರೇಂದ್ರ, ಮಹದೇವ, ನಾಗರಾಜು, ವೆಂಕಟರಮಣ, ಗೋವಿಂದರಾಜು, ಈಶ್ವರ್, ಪಾಳ್ಯ ಖ್ಯಖಸುಂದರ್ ನಾಯಕ, ಕೊಪ್ಪಾಳಿ ಮಹದೇವ ನಾಯಕ, ಶಂಕರ್
ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ಉಪಾಧ್ಯಕ್ಷ ಮಹದೇವ ನಾಯಕ, ನಿರ್ದೇಶಕರು ಕುನ್ನನಾಯಕ, ನಿಂಗನಾಯಕ, ಮುಡಿಗುಂಡ ನಟರಾಜು, ಪಾಳ್ಯ ಕೃಷ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

