ಮೈಸೂರು, ಜೂ.2: ರಾಜ್ಯ ಕಂಡ ಧೀಮಂತ ನಾಯಕ ಸಿದ್ದರಾಮಯ್ಯನವರ ರಾಜೀನಾಮೆಯಿಂದಾಗಿ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘ ಅಭಿನಂದನೆ ಸಲ್ಲಿಸಿತು.
ಸಂಘದ ನಿಕಟ ಪೂರ್ವ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಇಡೀ ದೇಶದಲ್ಲೇ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು, ಕರ್ನಾಟಕ ರಾಜ್ಯವನ್ನ ಸರ್ವ ಜನಾಂಗದ ಶಾಂತಿಯ ತೋಟದಂತೆ ಆಡಳಿತ ನಡೆಸಿ, ಬುದ್ಧ,ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ದೇಶವೇ ಮೆಚ್ಚುವ ಆಡಳಿತ ನೀಡಿದ ಸಿದ್ದರಾಮಯ್ಯನವರ ಸುಪುತ್ರ ಹಾಗೂ ವಿಧಾನಪರಿಷತ್ ಸದಸ್ಯರಾದ ಯತಿಂದ್ರ ಸಿದ್ದರಾಮಯ್ಯನವರಿಗೆ ಮೊದಲ ಹಂತದಲ್ಲೇ ಸೂಕ್ತ ಸ್ಥಾನಮಾನ ನೀಡುವಂತೆ, ಕರ್ನಾಟಕ ಪ್ರದೇಶ ಕುರುಬ ಸಂಘ ಒತ್ತಾಯಿಸಿತು.
ಕಾಂಗ್ರೆಸ್ ಹೈಕಮಾಂಡ್ ಗೆ ಈ ಕುರಿತು ಮನವಿ ಮಾಡಲಾಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘ ಮತ್ತು ಮೈಸೂರು ನಗರ, ಜಿಲ್ಲಾ, ತಾಲೂಕು ಕುರುಬರ ಸಂಘದ ವತಿಯಿಂದ ನಡೆದ ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಯತೀಂದ್ರ ಅವರನ್ನ ಮೊದಲ ಹಂತದಲ್ಲೇ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಬೇಕು.
ಅಹಿಂದ ವರ್ಗಗಳನ್ನು ಮುನ್ನಡೆಸಲು ಯುವ ನಾಯಕ ಯತೀಂದ್ರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು.
ಇದರೊಂದಿಗೆ ಹೈಕಮಾಂಡ್ ಹೇಳಿದಂತೆ ಪ್ರಬಲ ಸಚಿವ ಖಾತೆ ನೀಡಿ, ಉತ್ತಮ ಜನಸೇವೆಗೆ ಅವಕಾಶ ಮಾಡಿಕೊಡಬೇಕು
ಸಿದ್ದರಾಮಯ್ಯ ಅವರನ್ನು ಡಿ.ಕೆ ಶಿವಕುಮಾರ್ ಅವರ ಸಂಪುಟ ಹಾಗೂ ಹೈಕಮಾಂಡ್ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸಲಾಯಿತು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯನವರ ನೂರಾರು ಅಭಿಮಾನಿಗಳು ಮತ್ತು ಮೈಸೂರು ನಗರ ಜಿಲ್ಲಾ ತಾಲೂಕು ಕುರುಬ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
ಕುರುಬ ಸಮಾಜ ಸೇರದಂತೆ ಅಹಿಂದ ವರ್ಗದ ಶೇ 90 ಕ್ಕಿಂತ ಹೆಚ್ಚು ಮತಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಬಿದ್ದಿವೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯುವ ನಾಯಕ ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ ಉನ್ನತ ಖಾತೆ ನೀಡಬೇಕು, ಹಾಗೂ ನುಡಿದಂತೆ ನಡೆದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಕಾಂಗ್ರೆಸ್ ಹೈಕಮಾಂಡ್ ಉನ್ನತ ಸ್ಥಾನ ನೀಡಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.
