ಕೊಳ್ಳೇಗಾಲ, ಮೇ.1: ಕಾರ್ಮಿಕರ ಕಠಿಣ ಪರಿಶ್ರಮ, ತ್ಯಾಗ ಮತ್ತು ಸಾಧನೆಗಳನ್ನು ಗೌರವಿಸುವ ದಿನವೇ ಕಾರ್ಮಿಕರ ದಿನ ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಎಮ್. ರಂಜಿತ್ ಕುಮಾರ್ ಅವರು ಬಣ್ಣಿಸಿದರು.
ಪಟ್ಟಣದ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.
ಇದು ಕೆಲಸದ ಹಕ್ಕುಗಳು, ನ್ಯಾಯಯುತ ವೇತನ ಮತ್ತು ಸುರಕ್ಷಿತ ಕೆಲಸದ ವಾತಾವರಣದ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ ಸಿ ಶ್ರೀಕಾಂತ್ ಅವರು ನೆರವೇರಿಸಿದರು.
1886 ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆ (ಹೇಮಾರ್ಕೆಟ್ ಅಫೇರ್) ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ, ಇದು 8 ಗಂಟೆಗಳ ಕೆಲಸದ ಅವಧಿಯ ಬೇಡಿಕೆಯನ್ನು ಬೆಂಬಲಿಸುತ್ತದೆ.
ಕಾರ್ಮಿಕರ ಕೊಡುಗೆಯನ್ನು ಗುರುತಿಸುವುದು, ಕಾರ್ಮಿಕ ಸಂಘಗಳ ಶಕ್ತಿಯನ್ನು ಪ್ರದರ್ಶಿಸುವುದು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕರೆ ನೀಡುವುದು ಇದರ ಮುಖ್ಯ ಉದ್ದೇಶ. ಈ ದಿನವು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರಿಗೂ ನೆನಪಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ರಾಮಚಂದ್ರಯ್ಯ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಕಾರ್ಮಿಕ ನಿರೀಕ್ಷಕರಾದ ವಿ ಎಲ್ ಪ್ರಸಾದ್,ವಕೀಲರ ಸಂಘದ ಅಧ್ಯಕ್ಷರಾದ ಎನ್ ಬಸವರಾಜು, ವಕೀಲರಾದ ಡಿ ವೆಂಕಟಾಚಲ, ಪ್ಯಾನಲ್ ವಕೀಲರಾದ ಚಿನ್ನರಾಜು ಸಿ ಮತ್ತಿತರರು ಹಾಜರಿದ್ದರು.
