ಕೊಳ್ಳೇಗಾಲ: ದಿ.ಮರಿಸ್ವಾಮಿ ಅವರ ಸ್ಮರಣಾರ್ಥ ಅಗರ ಗ್ರಾಮದಲ್ಲಿ 2 ನೇ ವರ್ಷದ ಬೃಹತ್ ಉಚಿತ ಆರೋಗ್ಯ ತಪಾಸಣಾ ಏರ್ಪಡಿಸಿದ್ದು, 700 ಮಂದಿ ಆರೋಗ್ಯ ತಪಾಸಣೆ ಮಾಡಿಸಿ ಕೊಂಡರು.
ಶಿಬಿರಾರ್ಥಿಗಳಿಗೆ ತಪಾಸಣೆ ವೇಳೆ ಸ್ಥಳದಲ್ಲಿಯೇ ಉಚಿತ ಔಷಧ ವಿತರಣೆ ಮಾಡಲಾಯಿತು.
ಚಾ.ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾ.ನಗರದ ಹೆಲ್ಪ್ ಏಜ್ ಇಂಡಿಯಾ, ಮೈಸೂರಿನ ಜೆಎಸ್ಎಸ್ ಆಸ್ಪತ್ರೆ, ಸ್ಪಂದನ ಹಾಸ್ಪಿಟಲ್ ಸಹಯೋಗದೊಂದಿಗೆ ಅಗರ ಗ್ರಾಮದ ಹಿಂಡಿಮಾರಮ್ಮನ ದೇವಸ್ಥಾನದ ಆವರಣದಲ್ಲಿ ಕಿನಕಹಳ್ಳಿ ಗ್ರಾಮದ ರಾಜಶೇಖರ್ ಅವರು ತಮ್ಮ ತಂದೆ ದಿ.ಮರಿಸ್ವಾಮಿ ಅವರ ಸ್ಮರಣಾರ್ಥ 2ನೇ ವರ್ಷದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದರು.
ನಿರೀಕ್ಷೆಗೂ ಮೀರಿ 700 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಮೈಸೂರಿನ ಸ್ಪಂದನ ಹಾಸ್ಪೆಟಲ್ನ ಹೃದ್ರೋಗ ತಜ್ಞ ವೈದ್ಯ ಡಾ.ಅವಿನಾಶ್ ಸೇರಿದಂತೆ ತಜ್ಞ ವೈದ್ಯರಾದ ಡಾ.ಶ್ರೀನಿವಾಸ್, ಡಾ.ರಸಿಫ್ ತನ್ಸಿಯಾ ಹಾಗೂ ಇತರರ ತಂಡ ಶಿಬಿರದಲ್ಲಿ ಭಾಗವಹಿಸಿದ್ದ ರೋಗಿಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿದರೆ, ಚಾ.ನಗರದ ಹೆಲ್ಪ್ ಏಜ್ ಇಂಡಿಯಾದ ಸಂಯೋಜಕ ಪ್ರಕಾಶ್, ಜಿಲ್ಲಾ ಆರೋಗ್ಯ ಸಂಯೋಜಕ ರಾಜಣ್ಣ ಅವರು ರೋಗಿಗಳಿಗೆ ಸ್ಥಳದಲ್ಲಿಯೇ ಉಚಿತವಾಗಿ ಅಗತ್ಯ ಔಷಧ ವಿತರಿಸಿದರು.
ತಾಲೂಕಿನ ಕುಣಗಳ್ಳಿ, ಸೂರಾಪುರ, ಬನ್ನಿಸಾರಿಗೆ ಸೇರಿದಂತೆ ಯಳಂದೂರು ತಾಲೂಕಿನ ಅಗರ, ಮಾಂಬಳ್ಳಿ, ಬಸಪುರ, ಕಿನಕಹಳ್ಳಿ, ಕಟ್ನವಾಡಿ, ಕೆಸ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರೋಗಿಗಳಿಗೆ ಬಿಪಿ, ಶುಗರ್, ಇಸಿಜಿ, ಮೂಳೆ ಕೀಲುರೋಗ ತಪಾಸಣೆ, ರಕ್ತ ಹೀನತೆ ಪರೀಕ್ಷೆ, ಕಣ್ಣಿನ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಯಿತು.
ಕೊಳ್ಳೇಗಾಲ ರೋಟರಿ ಸಂಸ್ಥೆ ಅಧ್ಯಕ್ಷ ಎ.ದೊರೆಸ್ವಾಮಿ, ಜಿ.ಪಂ ಮಾಜಿ ಉಪಾಧ್ಯಕ್ಷ ಸಿದ್ದರಾಜು, ಯಳಂದೂರು ತಾ.ಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಅಗರ ಗ್ರಾ.ಪಂ ಪಿಡಿಒ ವೀಣಾ, ಗ್ರಾ.ಪಂ ಮಾಜಿ ಸದಸ್ಯ ಸುರೇಶ್, ನಾಗರಾಜು, ವೆಂಕಟಾಚಲ, ನಾಡಗೌಡರಾದ ಸುಬ್ಬಣ್ಣ, ಮುಖಂಡರಾದ ಕಿನಕಹಳ್ಳಿ ರಾಚಪ್ಪಾಜಿ, ದಿ.ಮರಿಸ್ವಾಮಿ ಅವರ ಪತ್ನಿ ಪುಟ್ಟನಂಜಮ್ಮ, ಪುತ್ರಿಯರಾದ ಸುವರ್ಣ, ಅನ್ನಪೂರ್ಣ, ರಾಜಶೇಖರ್, ಸುರೇಂದ್ರ ಕುಮಾರ್,ಸೋಮಶೇಖರ್, ಸೊಸೆ ಗೀತಾ, ಪರಶಿವ ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಶಿಬಿರದ ಆಯೋಜಕರಾದ ರಾಜಶೇಖರ್ ಕಿನಕಹಳ್ಳಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಕುರಿತು ಅರಿವು ಮೂಡಿಸುವ ಹವ್ಯಾಸವನ್ನು ನಾನು ಬಾಲ್ಯದಿಂದಲೂ ಹೊಂದಿದ್ದೇನೆ, ಇದನ್ನು ನಮ್ಮ ತಂದೆ ದಿ.ಮರಿಸ್ವಾಮಿ ಅವರಿಂದ ಕಲಿತಿದ್ದೇನೆ. ಹಾಗಾಗಿ, ನಮ್ಮ ತಂದೆ ಕಾಲವಾದ ನಂತರ ಪ್ರಥಮ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಮ್ಮ ಸ್ವಗ್ರಾಮ ಕಿನಕಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಳೆದ ವರ್ಷ ಯಶಸ್ವಿಯಾಗಿ ನಡೆಸಲಾಯಿತು ಎಂದು ಹೇಳಿದರು.
ಈಗ 2ನೇ ವರ್ಷದ ಶಿಬಿರ ಆಯೋಜನೆ ಮಾಡಿ ಪ್ರತಿ ಗ್ರಾಮದ ಮನೆಗಳಿಗೂ ಶಿಬಿರದ ಕುರಿತು ಕರ ಪತ್ರ ಹಂಚಿ ಆರೋಗ್ಯ ತಪಾಸಣೆಯಲ್ಲಿ ಭಾಗಿಯಾಗಲು ಮನವಿ ಮಾಡಲಾಗಿತ್ತು, ಶಿಬಿರದಲ್ಲಿ 700 ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿ ಕೊಂಡಿದ್ದಾರೆ,ಶಿಬಿರದ ಪ್ರಯೋಜನ ಪಡೆದ ಎಲ್ಲರಲ್ಲಿಯೂ ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲು ಕೋರಿದ್ದೇನೆ ಎಂದು ತಿಳಿಸಿದರು.
