ಮಂಡ್ಯ: ಖೇಲೋ ಇಂಡಿಯಾ ಯೋಜನೆ ಮೂಲಕ ದೇಶದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯಾ ಅವರು ತಿಳಿಸಿದರು.
ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಖೇಲೋ ಇಂಡಿಯಾ ಯೋಜನೆ ಅಡಿ 14 ಕೋಟಿ ವೆಚ್ಚದಲ್ಲಿ ವಿವಿದೋದ್ದೇಶ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮವನ್ನು ವಿ.ಸಿ ಫಾರಂನ ಜಿಲ್ಲಾ ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಘಾಟಿಸಿ ಅವರು ಮಾತಾನಾಡಿದರು.
ಕ್ರೀಡೆಗೆ ಹೊಸ ಭಾಷೆ ಬರೆಯಲು ಖೇಲೋ ಇಂಡಿಯಾ ಸಹಕಾರಿಯಾಗಿದೆ. ಕೇಂದ್ರ ಸರ್ಕಾರ ಯುವ ಕ್ರೀಡಾಪಟಗುಗಳಿಗೆ ಸಹಕಾರಿಯಾಗುವಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಂಡ್ಯದ ಯುವ ಕ್ರೀಡಾಪಟುಗಳಿಗೆ ಕ್ರೀಡಾ ಸಂಕೀರ್ಣಕ್ಕೆ ಅವಶ್ಯಕತೆ ಇದೆ. ಇದಕ್ಕಾಗಿ ವೈಯುಕ್ತಿಕವಾಗಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಸಂಪರ್ಕ ಮಾಡಿ ಮನವಿ ಮಾಡಿದ್ದರು. ಅದರಂತೆ ಇಂದು ಈ ಅಭಿವೃದ್ಧಿ ಕೆಲಸ ನೆರವೇರಿದೆ ಎಂದು ಮಾಂಡವೀಯ ತಿಳಿಸಿದರು.
ಇಳಿ ವಯಸ್ಸಿನಲ್ಲಿಯೂ ಹೆಚ್. ಡಿ.ದೇವೆಗೌಡರ ಉತ್ಸಾಹ ಎಲ್ಲರಿಗೂ ಮಾದರಿಯಾಗಿದೆ. ಅಷ್ಟೊಂದು ಉತ್ಸಾಹದಿಂದ ಸದನದಲ್ಲಿ ಭಾಗಿಯಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಕಲಚೇತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಹನ ನೀಡಲಾಗುತ್ತಿದೆ. ಮುಂದೆಯು ವಿಕಲಚೇತನ ಕ್ರೀಡಾಪಟುಗಳಿಗೆ ಅನುಕೂಲ ಆಗುವ ಕಾರ್ಯಕ್ರಮ ಕೊಡುತ್ತೇವೆ, ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ. ಮನ್ಸುಖ್ ಮಾಂಡವೀಯಾ ಅವರು ತಿಳಿಸಿದರು.
ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿ ಯುವ ಜನತೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಖೇಲೋ ಇಂಡಿಯಾ ಯೋಜನೆಯಡಿ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ತಳಮಟ್ಟದಿಂದ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಯುವ ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ, ತರಬೇತಿ ಮತ್ತು ಆರ್ಥಿಕ ನೆರವು ನೀಡುವ ಯೋಜನೆಯಗಿದೆ ಎಂದು ಅವರು ತಿಳಿಸಿದರು.
ಯುವಕರಿಗೆ ಉದ್ಯೋಗ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲೆಯ 380 ವಿಕಲಚೇತನರಿಗೆ ವಾಹನ ನೀಡಲಾಗುತ್ತಿದ್ದು 600 ಶಾಲೆಗಳಿಗೆ ಕಂಪ್ಯೂಟರ್ ಗಳನ್ನು ನೀಡಲಾಗುತ್ತಿದೆ ಎಂದು ಹೆಚ್ ಡಿ ಕೆ ತಿಳಿಸಿದರು.
ಜಿಲ್ಲೆಯ ಜನತೆಗೆ ಸಿ.ಎಸ್. ಆರ್ ಅನುದಾನದ ಮೂಲಕ 97 ಕೋಟಿ ಕಾರ್ಯ ಯೋಜನೆಗೆ ನೀಡಲಾಗುತ್ತಿದೆ ಮತ್ತು ಜಿಲ್ಲಾ ರೈತ ಸಭಾಂಗಣವನ್ನು ಕಟ್ಟಡ ನವೀಕರಣಕ್ಕೆ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಖೇಲೋ ಇಂಡಿಯಾ ಯೋಜನೆಯಡಿ ಕೆಲವು ಕಂಪನಿಯ ದಾನಿಗಳಿಂದ ವಿಶೇಷ ಚೇತನರನ್ನು ಸಬಲರನ್ನಾಗಿ ಮಾಡಲು ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ ಮತ್ತು ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್ ನೀಡಿ ಯುವಕರನ್ನು ದೈಹಿಕ ಮತ್ತು ಮಾನಸಿಕವಾಗಿ ಧೈರ್ಯ ತುಂಬುವ ಕಾರ್ಯ ನಿರ್ವಹಿಸುತಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆ.ಆರ್. ಪೇಟೆ ಶಾಸಕ ಹೆಚ್.ಟಿ.ಮಂಜು,ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ವಿವೇಕಾನಂದ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಸುರೇಶ್ಗೌಡ, ಡಾ.ಕೆ.ಅನ್ನದಾನಿ ಮತ್ತತರರು ಪಾಲ್ಗೊಂಡಿದ್ದರು.
