ಬೆಂಗಳೂರು: ನನ್ನ ಮಗನನ್ನು ನೋಡಿಕೊಳ್ಳಿ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವಕ್ಕೆ ತಿಲಾಂಜಲಿ ನೀಡಿದ್ದಾರೆ. ಇದು ಪ್ರಜಾಪ್ರಭುತ್ವವೇ ಹೊರತು ರಾಜಪ್ರಭುತ್ವ ಅಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಮಾಜವಾದಿ, ಕುಟುಂಬವಾದಿ ಅಲ್ಲ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಜನರ ಮುಂದೆ ಹೋಗಿ ಮಗನನ್ನು ನೋಡಿಕೊಳ್ಳಿ ಎಂದಿದ್ದಾರೆ. ಇನ್ನು ಆರು ತಿಂಗಳು ಕಳೆದರೆ ಮೊಮ್ಮಗನನ್ನೂ ನೋಡಿಕೊಳ್ಳಿ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಇದು ಪ್ರಜಾಪ್ರಭುತ್ವವೇ ಹೊರತು ರಾಜಪ್ರಭುತ್ವ ಅಲ್ಲ, ಯಾವುದೇ ಅಭ್ಯರ್ಥಿ ಮತದಾನದ ಮೂಲಕ ಗೆದ್ದು ಬರಬೇಕು. ಈ ರೀತಿ ಹೇಳಿಕೆ ನೀಡಿದರೆ ಅಂಬೇಡ್ಕರ್ಗೆ ಅಪಚಾರ ಮಾಡಿದಂತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಎಲ್ಪಿಜಿ ಸಿಲಿಂಡರ್ ಮಾರಾಟಕ್ಕೆ ಸಂಬಂಧಿಸಿದಂತೆ ವಂಚನೆ ನಡೆಯದಿರಲು ಎಸ್ಮಾ ಜಾರಿಯಲ್ಲಿದೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ್ ಮಾಡಲಿ ಎಂದು ಹೇಳಿಕೆ ನೀಡಬಾರದು. ಕಾಳಸಂತೆಯನ್ನು ತಡೆಯಲು ಅವರು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಯುದ್ಧ ನಡೆಯುತ್ತಿರುವ ಸಮಯದಲ್ಲಿ ಎಲ್ಪಿಜಿ ಕೊರತೆಯಾಗಿದ್ದು, ಇಂತಹ ಸಮಯದಲ್ಲಿ ತಾಳ್ಮೆಯಿಂದ ಸಹಕಾರ ನೀಡಬೇಕಾಗುತ್ತದೆ. ಎಲ್ಲದರಲ್ಲೂ ರಾಜಕೀಯ ಮಾಡಬಾರದು. ಇದರಲ್ಲೂ ರಾಜಕೀಯ ಮಾಡಿದರೆ ಕಾಂಗ್ರೆಸ್ಗೆ ಗೌರವ ಇರುವುದಿಲ್ಲ ಎಂದು ಅಶೋಕ ತಿಳಿಸಿದರು.
ಡಿ.ಕೆ.ಶಿವಕುಮಾರ್ ಡಿನ್ನರ್ ಪಾರ್ಟಿ ಕರೆದ ಬಳಿಕ ಸಿಎಂ ಸಿದ್ದರಾಮಯ್ಯನವರ ಗ್ಯಾಂಗ್ ಪ್ರತಿ ದಿನ ಡಿನ್ನರ್ ಪಾರ್ಟಿ ನಡೆಸುತ್ತಿದೆ. ಜನಸಾಮಾನ್ಯರು ಹೊಟ್ಟೆ ತುಂಬ ಊಟ ಮಾಡುತ್ತಿದ್ದಾರೋ ಇಲ್ಲವೋ ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಜನರ ಕಷ್ಟಗಳ ಬಗ್ಗೆ ಇವರಿಗೆ ಗಮನವಿಲ್ಲ. ಬಜೆಟ್ನಲ್ಲಿ ಯಾವುದು ಘೋಷಣೆಯಾಗಿದೆ, ಏನಾಗಬೇಕಿದೆ ಎಂದು ಕಾಂಗ್ರೆಸ್ ನಾಯಕರು ಚರ್ಚಿಸುತ್ತಿಲ್ಲ ಎಂದು ಟಾಂಗ್ ನೀಡಿದರು.
ಎಸ್ಐಆರ್ಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ನಾನು ಭಾಗವಹಿಸಿದ್ದೇನೆ. ರಾಜ್ಯದಲ್ಲಿ ಬಾಂಗ್ಲಾ ಹಾಗೂ ಪಾಕಿಸ್ತಾನದ ಪ್ರಜೆಗಳು ಕೂಡ ಇದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಇವರೆಲ್ಲರನ್ನೂ ಪಟ್ಟಿಯಿಂದ ಹೊರಗಿಡಲು ಕ್ರಮ ವಹಿಸಬೇಕೆಂದು ಚರ್ಚೆಯಾಗಿದೆ. ಈ ಕುರಿತು ಚುನಾವಣಾ ಆಯೋಗದಿಂದ ಹೆಚ್ಚು ಕ್ರಮ ಕೈಗೊಳ್ಳಬೇಕಿದೆ ಎಂದು ಅಶೋಕ ಅಭಿಪ್ರಾಯ ಪಟ್ಟರು.
