ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಜಯ ದಾಖಲಿಸಿದೆ.
ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಆಡಳಿತ ಅಂತ್ಯವಾಗಿದೆ, ಕೇರಳದಲ್ಲಿ ಯುಡಿಎಫ್ 10 ವರ್ಷದ ಬಳಿಕ ಮತ್ತೆ ಅಧಿಕಾರ ಹಿಡಿಯುತ್ತಿದೆ.
ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ ಸುಮಾರು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸ್ಪಷ್ಟ ಬಹುಮತ ಪಡೆದಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ಪುತುಪಳ್ಳಿಯಲ್ಲಿ ಸುಮಾರು 52,907 ಮತಗಳ ಬೃಹತ್ ಅಂತರದಿಂದ ಜಯಗಳಿಸಿದ್ದಾರೆ.
ಹರಿಪಾಡ್ ಕ್ಷೇತ್ರದಲ್ಲಿ ರಮೇಶ್ ಚೆನ್ನಿತ್ತಲ 23,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಸ್ಲಿಂ ಲೀಗ್ ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ 23ರಲ್ಲಿ ಮುನ್ನಡೆ ಸಾಧಿಸಿ ಯುಡಿಫ್ ಗೆಲುವಿಗೆ ಬಲ ತುಂಬಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದ ಎಡರಂಗ ಮೈತ್ರಿಕೂಟಕ್ಕೆ ಆಡಳಿತ ವಿರೋಧಿ ಅಲೆ ತೀವ್ರವಾಗಿ ತಟ್ಟಿದೆ.
ಕಾಂಗ್ರೆಸ್ ಮೈತ್ರಿಕೂಟದ ಸಂಘಟಿತ ಹೋರಾಟ ಮತ್ತು ಜನಕಲ್ಯಾಣ ಯೋಜನೆಗಳ ಭರವಸೆಗಳು ಜನರ ಮನ ಸೆಳೆದಿವೆ.ಹಾಗಾಗಿ ಭರ್ಜರಿ ಗೆಲುವು ಸಾಧಿಸಿದೆ. ಯುಡಿಎಫ್ ಕೇಂದ್ರ ಕಚೇರಿಗಳಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
