ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ 110 ಹಳ್ಳಿಗಳ 2.5 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಯು ನಾಗರಿಕರಿಗೆ ನೀರನ್ನು ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷ ದೂರಿದೆ.
ಬೆಂಗಳೂರು ಜಲ ಮಂಡಳಿ ವಿಧಿಸುತ್ತಿರುವ ಬಳಕೆದಾರರ ಶುಲ್ಕ ಅತ್ಯಂತ ದುಬಾರಿಯಾಗಿದ್ದು ಇದರಲ್ಲಿ ಶೇ.
50 ರಷ್ಟು ರಿಯಾಯಿತಿ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಈ ಬಗ್ಗೆ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ, ಈ ಯೋಜನೆಗೆ ಈಗಾಗಲೇ 5500 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆ ಮುಗಿದು 2 ವರ್ಷಗಳಾಗುತ್ತಾ ಬರುತ್ತಿದೆ. ಆದರೆ ಸಾರ್ವಜನಿಕರು ಜಲಮಂಡಳಿಯ ಅತ್ಯಂತ ದುಬಾರಿ ಬಳಕೆದಾರರ ಶುಲ್ಕವನ್ನು ಭರಿಸಲಾಗದೆ ಸಂಪರ್ಕಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರವು ಒಂದು ಕಡೆ ಕುಡಿಯುವ ನೀರಿನ ಯೋಜನೆಗೆ ವಿದೇಶಗಳಿಂದ ಸಾಲ ಮಾಡಿದೆ ಸಾಲವನ್ನು ತೀರಿಸಬೇಕೆಂಬ ನೆಪದಲ್ಲಿ ಮತ್ತೊಂದು ಕಡೆ ನಾಗರಿಕರಿಂದ ಕೋಟ್ಯಾಂತರ ರೂಪಾಯಿಗಳನ್ನು ಕೊಳ್ಳೆಹೊಡೆಯುವ ಹುನ್ನಾರ ದಲ್ಲಿ ತೊಡಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕೂಡಲೇ ಸರ್ಕಾರವು ಕೊನೆಯ ಹಂತದ ಮನೆಗಳಿಗೆ ನೀರನ್ನು ತಲುಪಿಸುವ ಪೈಪ್ ಲೈನ್ ಕಾಮಗಾರಿಗಳನ್ನು ಮುಗಿಸಬೇಕು ಹಾಗೂ 8 ರಿಂದ 10 ಕಂತುಗಳಲ್ಲಿ ರಿಯಾಯಿತಿ ನೀಡಿರುವ ಬಳಕೆದಾರರ ಶುಲ್ಕವನ್ನು ತೆಗೆದುಕೊಳ್ಳಬೇಕು. ಈ ರೀತಿಯ ಕ್ರಮಗಳನ್ನು ತೆಗೆದುಕೊಂಡರೆ ಸಾರ್ವಜನಿಕರು ಸಹ ಮುಂದೆ ಬಂದು ಈ ಯೋಜನೆಯ ಸದ್ಬಳಕೆಯನ್ನು ಮಾಡಿಕೊಳ್ಳುತ್ತಾರೆ. ಕೂಡಲೇ ಮುಖ್ಯಮಂತ್ರಿಗಳು ವಿಶೇಷ ಸಭೆಯನ್ನು ಕರೆದು ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಸತೀಶ್ ಕುಮಾರ್ ಒತ್ತಾಯಿಸಿದ್ದಾರೆ.
