ಮೈಸೂರು: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಡಬಮ್ ಎಂ.ರಮೇಶ್ ಅವರ ‘ಸಾರ್ಥಕ ಬದುಕು’ ಆತ್ಮಕಥನವನ್ನು ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಸುತ್ತೂರು ಶ್ರೀಗಳು, ಇತ್ತೀಚೆಗೆ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದ್ದು, ಸುತ್ತಲಿನವರು ನಿರ್ಲಕ್ಷ್ಯ ಮಾಡುವುದರಿಂದ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಜೆಎಸ್ಎಸ್ನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ಮಾನಸಿಕ ಖಿನ್ನತೆಯಿಂದ ಬಳಲುವವರನ್ನು ಗುರುತಿಸುವ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸಂಸದ ಯದುವೀರ್ ಮಾತನಾಡಿ, ಮಾನಸಿಕ ಆರೋಗ್ಯ ದೇಶದಲ್ಲಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರ. ಪ್ರಾಚೀನ ಭಾರತದ ಆರೋಗ್ಯ ಜ್ಞಾನವನ್ನು ಇಂದಿಗೂ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಸ್.ಎ.ರಾಮದಾಸ್, ಮನೋರೋಗಕ್ಕೆ ಚಿಕಿತ್ಸೆಗಿಂತ ಜಾಗೃತಿ ಮುಖ್ಯ. ಕಡಬಮ್ಸೌ ಸಂಸ್ಥೆ ಔಟ್ರೀಚ್ ಕಾರ್ಯಕ್ರಮವನ್ನು ಮೈಸೂರಿನಿಂದಲೇ ಆರಂಭಿಸಬೇಕು ಎಂದು ಮನವಿ ಮಾಡಿದರು.
ಕೃತಿಕರ್ತ ಕಡಬಮ್ ಎಂ.ರಮೇಶ್, ಪುತ್ರರಾದ ಕಡಬಮ್ ಸಂದೇಶ್, ಶ್ರೇಯಸ್ ಕಡಬಮ್ಸ್ ಪುತ್ರಿಯರಾದ ನೇಹಾ, ದಿವ್ಯಾ ಕಡಬಮ್ಸ್ ,ಮಾಜಿ ಮೇಯರ್. ಎಚ್.ಎನ್.ಶ್ರೀಕಂಠಯ್ಯ, ಕರೂರ್ ವೈಶ್ಯ ಬ್ಯಾಂಕ್ ನಿರ್ದೇಶಕ ಎಂ.ವಿ.ಶ್ರೀನಿವಾಸಮೂರ್ತಿ, ಬೆಳಗಾವಿಯ ರಿಟಾ ಉಪಸ್ಥಿತರಿದ್ದರು.
