ಮೈಸೂರು: ಇದೇ ಜೂನ್ 27 ರಂದೇ ಮೈಸೂರಲ್ಲಿ ಅದ್ಧೂರಿಯಾಗಿ ಕೆಂಪೇಗೌಡ ಜಯಂತಿ ಆಚರಿಸಲು ಒಕ್ಕಲಿಗರ ಸಂಘಗಳು ಒಮ್ಮತದ ನಿರ್ಣಯ ಕೈಗೊಂಡಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ರಚನೆ ಸೇರಿ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ, ಎಂದಿನಂತೆ ಜೂ.27ರಂದೇ ಮೈಸೂರಿನ ಕಲಾಮಂದಿರದಲ್ಲಿ ಸರ್ಕಾರದ ಸಹಯೋಗದೊಂದಿಗೆ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ವಿವಿಧ ಜಿಲ್ಲಾ ಒಕ್ಕಲಿಗರ ಸಂಘಗಳು ಒಮ್ಮತದಿಂದ ತೀರ್ಮಾನಿಸಿವೆ.
ನಗರದ ಜಲದರ್ಶಿನಿಯಲ್ಲಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ, ವಿವಿಧ ಒಕ್ಕಲಿಗ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಪ್ರಾರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಕರೆದು ಬೇರೊಂದು ದಿನ ಆಚರಿಸಲು ತೀರ್ಮಾನಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ರಾಜ್ಯದ ಇತರೆ ಕೆಲಸಗಳ ನಿಮಿತ್ತ ಮುಂದಿನ ದಿನಗಳಲ್ಲಿ ಬರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಎಂದಿನಂತೆ ಜೂ.27ರಂದೇ ಜಿಲ್ಲಾಡಳಿತದೊಂದಿಗೆ ಸೇರಿ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ,ರಾಜಕೀಯವನ್ನು ಕೇವಲ ಎರಡು ತಿಂಗಳಿಗೆ ಸೀಮಿತಗೊಳಿಸೋಣ. ಸಮುದಾಯದ ವಿಚಾರ ಬಂದಾಗ ಪಕ್ಷಾತೀತವಾಗಿ ಒಮ್ಮತದಿಂದ ಕೆಂಪೇಗೌಡ ಜಯಂತಿ ಆಚರಿಸೋಣ ಎಂದು ಕರೆ ನೀಡಿದರು.
ಮುಂದಿನ ವರ್ಷದಿಂದ ಮೂರು ತಿಂಗಳು ಮುನ್ನವೇ ತಯಾರಿ ನಡೆಯಬೇಕು, ಪ್ರಚಾರ ಕೈಗೊಂಡು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮುದಾಯದ ಶಕ್ತಿ ತೋರಬೇಕು ಎಂದು ಹೇಳಿದರು.
8 ಸಮಿತಿ ರಚನೆ:
ಶ್ರೀ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷ ಪಿ. ಪ್ರಶಾಂತಗೌಡ ಮಾತನಾಡಿ,ಪ್ರಚಾರ, ಆಹಾರ, ಪ್ರತಿಭಾ ಪುರಸ್ಕಾರ, ಸ್ವಾಗತ, ಹಣಕಾಸು ಸೇರಿ ಎಂಟಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗುತ್ತಿದೆ. ಆಸಕ್ತ ಸಮುದಾಯದವರು ಮುಂದೆ ಬಂದು ಜಯಂತಿ ಯಶಸ್ಸಿಗೆ ಕೆಲಸ ಮಾಡಬಹುದು. ಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಹರೀಶ್ಗೌಡ ಹಾಗೂ ಮಾಜಿ ಶಾಸಕ ಎಲ್. ನಾಗೇಂದ್ರ ಮಾರ್ಗದರ್ಶನದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಹಾಲಿ-ಮಾಜಿ ಶಾಸಕರು ಸೇರಿ ಗಣ್ಯರನ್ನು ಆಹ್ವಾನಿಸಲಾಗುವುದು. ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಮುದಾಯದ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ. ಶ್ರೀಧರ್, ಮೈಸೂರು-ಚಾಮರಾಜನಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಮರಿಸ್ವಾಮಿ, ಗೌರವಾಧ್ಯಕ್ಷ ಆಲತೂರು ಜಯರಾಮ್, ಉಪಾಧ್ಯಕ್ಷ ರವಿಕುಮಾರ್ ರಾಜಕೀಯ, ಬನ್ನೂರು ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ.ಈ. ಚೇತನ್, ನಿರ್ದೇಶಕರಾದ ಒಂಟಿಕೊಪ್ಪಲು ಗುರುರಾಜ್, ರವಿ, ಬಿ.ಪಿ. ಬೋರೇಗೌಡ, ಗಿರೀಶ್ ಗೌಡ, ಜಿ. ಕುಮಾರ್ ಗೌಡ, ಎಂ. ಸುಶೀಲ ನಂಜಪ್ಪ, ಉಮೇಶ್, ಬೀಡನಹಳ್ಳಿ ಸತೀಶ್ ಗೌಡ, ನೇಗಿಲಯೋಗಿ ರವಿಕುಮಾರ್, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಲಕ್ಷ್ಮಿದೇವಿ, ರಾಕೇಶ್ ಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಕೃಷ್ಣೇಗೌಡ, ಕೆ.ಜಿ. ಕೊಪ್ಪಲು ರಾಜಣ್ಣ, ಜೆ.ಪಿ.ನಗರ ಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಮರಿಗೌಡ ಮತ್ತಿತರರು ಉಪಸ್ಥಿತರಿದ್ದರು.
