ನಂಜನಗೂಡು: ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಉಪ್ಪನಹಳ್ಳಿ ಗ್ರಾಮದ ಎಂ.ಮಹದೇವಸ್ವಾಮಿ ಅವರು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದು ಶಿಕ್ಷಕ ವೃಂದ ಕೊಂಡಾಡಿತು.
ಕರ್ನಾಟಕ ನ್ಯಾಯಾಂಗ ಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಉತ್ತಮ ಸಾಧನೆ ಮಾಡಿರುವ ಅವರು ನ್ಯಾಯಾಧೀಶರಾಗಿ ಆಯ್ಕೆಯಾಗಿದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಎಂ ಮಹದೇವಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹದೇವಸ್ವಾಮಿ ಅವರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡು ನಾನು ಈ ಮಟ್ಟಕ್ಕೆ ಬರಬೇಕಾದರೆ ಕಾಲೇಜಿನ ಉಪನ್ಯಾಸಕರು ಮುಖ್ಯ ಕಾರಣ. ಹಾಗಾಗಿ ಅವರ ಬೋಧನೆ ಸಲಹೆಗಳನ್ನು ಸ್ಮರಣೆ ಮಾಡುತ್ತೇನೆ. ಮುಂದೆ ಪ್ರಾಮಾಣಿಕವಾಗಿ ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
2004 ರಲ್ಲಿ ಅವರು ಈ ಕಾಲೇಜಿನಲ್ಲಿ ಪಿ ಯು ಸಿ ಕಲಾ ವಿಭಾಗದಲ್ಲಿ ಅಭ್ಯಾಸ ಮಾಡಿದ್ದು ತಮ್ಮ ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಶಿಸ್ತಿನ ಜೀವನ, ಪರಿಶ್ರಮ ಮತ್ತು ನಿಷ್ಠೆಯಿಂದ ಗುರುತಿಸಿಕೊಂಡಿದ್ದರು.
ಮಹಾರಾಜ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ ನಂತರ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ನ್ಯಾಯಾಂಗ ಸೇವೆಗೆ ಪ್ರವೇಶಿಸಲು ನಿರಂತರವಾಗಿ ಏಳು ಬಾರಿ ಪ್ರಯತ್ನ ನಡೆಸಿದ ಅವರು ಈಗ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಯುವಕರಿಗೆ ಪ್ರೇರಣೆಯಾಗಿದೆ.
ಈ ಸಾಧನೆಯ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಅವರು ಅವರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ನ್ಯಾಯ ವ್ಯವಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಸಮಾಜಕ್ಕೆ ನ್ಯಾಯ ಹಾಗೂ ಧರ್ಮದ ಮೌಲ್ಯಗಳನ್ನು ಕಾಪಾಡುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ,ಬಿ.ಎಸ್.ನಾಗರಾಜ, ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಎನ್.ನಾಗರಾಜು, ಡಾ. ಟಿ ಕೆ ರವಿ ,ಡಾ ಮಾಲತಿ, ಡಾ. ಸುಮಾ ,ಸ್ವಾಮಿ ಗೌಡ, ಪ್ರಕಾಶ್ ಎಚ್ ಕೆ ಮತ್ತಿತರ ಉಪನ್ಯಾಸಕರು ಹಾಜರಿದ್ದರು.
