ಬೆಂಗಳೂರು: ಜಾನಪದವು ನಮ್ಮ ಸಂಸ್ಕೃತಿಯ ಮೂಲಾಧಾರವಾಗಿದ್ದು, ಅದನ್ನು ಬಳಸುವ ಹಾಗೂ ಬೆಳೆಸುವ ಕಾರ್ಯ ಯುವಜನರಿಂದ ಹೆಚ್ಚಾಗಿ ಆಗಬೇಕು ಎಂದು
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ತಿಳಿಸಿದರು.
ಬೆಂಗಳೂರಿನ ಸಂತ ಕ್ಲಾರೆಟ್ ಕಾಲೇಜು ಹಾಗೂ ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಾಲೆಂಟೈನ್ಸ್ ಡೆ ಯನ್ನು ಹೇಗೆ ವ್ಯಾಪಕವಾಗಿ ಆಚರಿಸಲಾಗುತ್ತದೆಯೋ, ಅದೇ ರೀತಿಯಲ್ಲಿ ವಿಶ್ವ ಜಾನಪದ ದಿನಾಚರಣೆಯನ್ನೂ ಜನಸಾಮಾನ್ಯರ ಹಬ್ಬವಾಗಿ ಆಚರಿಸುವ ಅಗತ್ಯವಿದೆ ಎಂದು ಹೇಳಿದರು.
ಜಾನಪದವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದು ಅಲಿಖಿತ ಸಂವಿಧಾನದಂತೆ ಕಾರ್ಯನಿರ್ವಹಿಸುತ್ತದೆ. ಜಾನಪದಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟು ಇಲ್ಲ. ಕಾಲಕ್ಕೆ ತಕ್ಕಂತೆ ಪರಿವರ್ತನೆಗೊಳ್ಳುತ್ತದೆ ಹೊರತು ಎಂದಿಗೂ ನಶಿಸುವುದಿಲ್ಲ. ಆದ್ದರಿಂದ ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ
ಎಂದು ಡಾ. ಜಾನಪದ ಎಸ್. ಬಾಲಾಜಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಂತರರಾಷ್ಟ್ರೀಯ ಜಾನಪದ ಕಲಾವಿದ ಕಡಬಗೆರೆ ಮುನಿರಾಜು ಮಾತನಾಡಿ, ನಮ್ಮ ತಾತ-ಮುತ್ತಾತಂದಿರ ಕಾಲದಿಂದಲೇ ಜಾನಪದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಹಿರಿಯರು ನೀಡಿರುವ ಈ ಅಮೂಲ್ಯ ಕೊಡುಗೆಯನ್ನು ನಾವು ಎಂದಿಗೂ ದೂರ ಮಾಡಲು ಸಾಧ್ಯವಿಲ್ಲ. ಅನಕ್ಷರಸ್ಥರ ಬಾಯಿಂದ ಬಾಯಿಗೆ ಹರಡಿದ ಜಾನಪದ ಇಂದು ವಿಶ್ವವ್ಯಾಪಿಯಾಗಿದೆ. ಜಾನಪದವನ್ನು ಕೇವಲ ಕಲೆಯಾಗಿ ಅಲ್ಲ, ಹೃದಯದಿಂದ ಆರಾಧಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಅಂತರರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದ ಕಡಬಗೆರೆ ಮುನಿರಾಜ್ ಅವರನ್ನು ಕನ್ನಡ ಜಾನಪದ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಪ್ರಚಾರ ಹಾಗೂ ಪ್ರಸಾರಕ್ಕೆ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕನ್ನಡ ಜಾನಪದ ಪರಿಷತ್ ಹಾಗೂ ಸಂತ ಕ್ಲಾರೆಟ್ ಕಾಲೇಜು ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಳಕಾರ್ಯಕ್ರಮದಲ್ಲಿ ಸಂತ ಕ್ಲಾರೆಟ್ ಕಾಲೇಜಿನ ಭಾಷೆಗಳ ವಿಭಾಗದ ಮುಖ್ಯಸ್ಥರಾದ ಡಾ. ಮಾದೇಶ್ ಎನ್., ಕಾರ್ಯಕ್ರಮದ ಸಂಚಾಲಕಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಕಲಾ ಯು., ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಿದ್ದಲಿಂಗಪ್ಪ ಎಸ್. ದೇಶಮುಖ್, ಡಾ. ಕುಮಾರ್ ಇಂದ್ರಬೆಟ್ಟ, ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಕೆ.ಸಿ. ಕಾಂತಪ್ಪ, ಸದಾನಂದ ಎಂ. ಮತ್ತಿತರ ಜಾನಪದ ಅಭಿಮಾನಿಗಳು ಉಪಸ್ಥಿತರಿದ್ದರು.
