ಮೈಸೂರು: ಜಲ ಜೀವನ್ ಮಿಷನ್ ಅವಧಿಯನ್ನು ಡಿಸೆಂಬರ್ 2028 ರವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸುಸ್ಥಿರ ಗ್ರಾಮೀಣ ಪೈಪ್ಲೈನ್ ಕುಡಿಯುವ ನೀರು ಪೂರೈಕೆಗಾಗಿ ‘ಜಲ ಜೀವನ್ ಮಿಷನ್’ ಯೋಜನೆಯನ್ನು ಮರುಸಂಘಟಿಸುವ ಜಲಶಕ್ತಿ ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಈ ನಿರ್ದಾರದಿಂದ ಯೋಜನೆಯ ಗಮನವು ಕೇವಲ ‘ಮೂಲಸೌಕರ್ಯ ನಿರ್ಮಾಣ’ ಮಾತ್ರ ಆಗಿರುವುದಿಲ್ಲ ‘ಸೇವಾ ವಿತರಣೆ’ಯೂ ಆಗಿರಲಿದೆ. ಕುಡಿಯುವ ನೀರು ಪೂರೈಕೆಗೆ ಹೆಚ್ಚು ಆದ್ಯತೆ ನೀಡಲಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ನಾನು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಕ್ರಿಯಾ ಯೋಜನೆ ರೂಪಿಸಲು ಸೂಚಿಸುತ್ತೇನೆ. ನಮ್ಮ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.
ದೇಶದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುತಿಸಿರುವ 19.36 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ, ಇಂದಿನವರೆಗೆ ಸುಮಾರು 15.80 ಕೋಟಿ ಕುಟುಂಬಗಳು ನಲ್ಲಿ ನೀರು ಸಂಪರ್ಕ ಹೊಂದಿವೆ ಎಂದು ವರದಿಯಾಗಿದೆ. ಎಸ್.ಬಿ.ಐ ರಿಸರ್ಚ್ ವರದಿಯ ಪ್ರಕಾರ, ಜಲ ಜೀವನ್ ಮಿಷನ್ 9 ಕೋಟಿ ಮಹಿಳೆಯರನ್ನು ನೀರು ತರುವ ಕಷ್ಟದ ಕೆಲಸದಿಂದ ಮುಕ್ತಗೊಳಿಸಿದೆ, ಇದು ಅವರು ಇತರ ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಿದೆ.
ಜೆಜೆಎಂ 2.0 ಅಡಿಯಲ್ಲಿ, ಡಿಸೆಂಬರ್ 2028ರ ವೇಳೆಗೆ ದೇಶಾದ್ಯಂತ ಇರುವ ಎಲ್ಲಾ 19.36 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕವನ್ನು ಒದಗಿಸುವ ಮೂಲಕ ಎಲ್ಲಾ ಗ್ರಾಮ ಪಂಚಾಯತ್ ಗಳನ್ನು ‘ಹರ್ ಘರ್ ಜಲ್’ ಎಂದು ಪ್ರಮಾಣೀಕರಿಸಲು ಅನುವು ಮಾಡಿಕೊಡಲಾಗುವುದು.
