ಮೈಸೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದ ವ್ಯಕ್ತಿಯನ್ನು ಲೆಕ್ಕಿಸದೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೈಸೂರು ನ್ಯಾಯಾಲಯವು ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
2022 ರಲ್ಲಿ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಎಂಬಾತನ ಮೇಲೆ ಬಾಬು ಧಾಮಸ್ ಎಂಬಾತ ಹಲ್ಲೆ ನಡೆಸಿ ಬಳಿಕ ಕಾರಿನಿಂದ ಗುದ್ದಿದ್ದ.ಆ ರಭಸಕ್ಕೆ ಚಂದ್ರಶೇಖರ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾನೆ. ಹೀಗಿದ್ದೂ ಚಂದ್ರಶೇಖರ್ ಅವರನ್ನು ರಕ್ಷಿಸದೆ ಕೊಲೆ ಮಾಡುವ ಉದ್ದೇಶದಿಂದ ಬಾನೆಟ್ ಮೇಲೆ ಬಿದ್ದಿದ್ದವರನ್ನು ಹಾಗೆಯೇ ಕಾರನ್ನು ಸುಮಾರು 800 ಮೀಟರ್ ದೂರ ಎಳೆದೊಯ್ದು ಅಪಾಯಕಾರಿಯಾಗಿ ಚಲಾಯಿಸಿದ್ದನೆಂದು ಆರೋಪಿಸಲಾಗಿತ್ತು.
ಕೊಲೆ ಮಾಡುವ ದುರುದ್ದೇಶದಿಂದ ಕೃತ್ಯ ಎಸಗಿದ ಬಾಬು ಧಾಮಸ್ ವಿರುದ್ಧ ಎನ್.ಆರ್.ಸಬ್ ಇನ್ಸ್ಪೆಕ್ಟರ್ ಜಯಕೀರ್ತಿ ಅವರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಜಯಕೀರ್ತಿ ಅವರ ತನಿಖೆಗೆ ಸಿಪಿಐ ಶಿವಣ್ಣ ಸಹಕಾರ ನೀಡಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅನಂತ್ ಹೆಚ್ ಅವರು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾಗಿ ಸುಧಾ ಅವರು ವಾದ ಮಂಡಿಸಿದ್ದರು.
