ಟೆಹ್ರಾನ್, ಮೇ.1: ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹರಡಿದ್ದ ಊಹಾಪೋಹಗಳಿಗೆ ಇರಾನ್ ಅಧಿಕಾರಿಗಳು ತೆರೆ ಎಳೆದಿದ್ದಾರೆ.ನಮ್ಮ ನಾಯಕ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಮೊಜ್ತಬಾ ಖಮೇನಿ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅಮೆರಿಕ ಆಗಾಗ ಆರೋಪ ಮಾಡುತ್ತಲೇ ಇತ್ತು.
ಇದಕ್ಕೆ ಈಗ ಇರಾನ್ ಪ್ರತಿಕ್ರಿಯೆ ನೀಡಿರುವ ಇರಾನ್, ಅಮೆರಿಕದ ಹೇಳಿಕೆಗಳನ್ನು ತಳ್ಳಿಹಾಕಿದೆ. ಸುಪ್ರೀಂ ನಾಯಕ ಪರಿಪೂರ್ಣವಾಗಿ ಆರೋಗ್ಯವಾಗಿದ್ದಾರೆ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶತ್ರು ದೇಶಗಳು ವದಂತಿಗಳನ್ನು ಹರಡಲು ಇಂತಹ ತಂತ್ರಗಳನ್ನು ಬಳಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಜ್ತಾಬಾ ಖಮೇನಿ ಅಮೆರಿಕದಿಂದ ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲಿದ್ದರು. ಆದರೆ ಅವರನ್ನು ರಕ್ಷಿಸಲಾಯಿತು ಎಂದು ಅಧಿಕಾರಿ ಕೋಮಿ ಸ್ಪಷ್ಟಪಡಿಸಿದ್ದಾರೆ.
ಅವರು ಬಾಂಬ್ ದಾಳಿಗೊಳಗಾದ ಕಟ್ಟಡದಲ್ಲೇ ಇದ್ದರು ಎಂಬುದು ಸತ್ಯ,ಅಲ್ಲಿದ್ದ ಇತರರು ಹುತಾತ್ಮರಾದರು. ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ದೇವರ ಇಚ್ಛೆಯಿಂದ ಅವರು ಬೇರೆಡೆ ಹೋಗಿದ್ದರು. ದೇವರು ಅವರನ್ನು ರಕ್ಷಿಸಬೇಕೆಂದು ಬಯಸಿದ್ದರು ಎಂದು ಅವರು ಹೇಳಿದ್ದಾರೆ.
ಸದ್ಯಕ್ಕೆ ಅವರು ಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರೇ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ವಿವಿಧ ಪರಿಸ್ಥಿತಿಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಅವರು ನಿರ್ದಿಷ್ಟ ಸೂಚನೆಗಳನ್ನು ಸಹ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
